ಬೆಳಗಾವಿ/ ಬೆಂಗಳೂರು:- ಆನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಕಳೆ ಹೆಚ್ಚಾಗುತ್ತಿರುವುದರಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿದ್ದು, ಕಳೆ ತೆರವು ಮಾಡಿ ವನ್ಯಜೀವಿಗಳ ಸಂಚಾರ ಮತ್ತು ಆಹಾರ ಲಭ್ಯತೆ ಹೆಚ್ಚಿಸಲು ಬೇಕಾದ ಎಲ್ಲ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ. ಅದೇ ರೀತಿ ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಶಾಶ್ವತ ಪರಿಹಾರವಾಗಿದ್ದು, ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮವಹಿಸಲಾಗುತ್ತದೆ ಎಂದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಬಂಡೀಪುರ, ನಾಗರಹೋಳೆ, ಬನ್ನೇರುಘಟ್ಟ ಅರಣ್ಯದಲ್ಲಿ ಕಳೆಯದ್ದು ದೊಡ್ಡ ಸಮಸ್ಯೆ ಇದೆ. ಲಂಟಾನ ನಮ್ಮ ಕಳೆಯಲ್ಲ. ವಿದೇಶದಿಂದ ಬಂದಿದೆ. ಸುಟ್ಟರೂ ಮತ್ತೆ ಬೆಳೆಯುತ್ತಿದೆ. ಈ ಬಗ್ಗೆ ಸಂಶೋಧನೆ ಆಗಿದೆ. ಭೂಮಿಯ ಕೆಳಗೆ ನಾಲ್ಕು ಇಂಚು ಒಳಗಿನಿಂದ ತೆಗೆದುಹಾಕಬೇಕು ಎಂದು ವರದಿ ಕೊಟ್ಟಿದ್ದಾರೆ. ಅರಣ್ಯದಲ್ಲಿ ಶೇ.40-50 ರಷ್ಟು ಕಳೆ ಇರುವ ಕಾರಣ ವನ್ಯಜೀವಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರ ನಿವಾರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವನ್ಯಜೀವಿಗಳ ಆಹಾರಕ್ಕೆ ಬೇಕಾದ ಗಿಡ ಬೆಳೆಯಲಾಗುತ್ತಿದೆ. 1 ಹೆಕ್ಟೇರ್ ಕಳೆ ತೆರವು ಮಾಡಲು 87 ಸಾವಿರ ರೂ. ಖರ್ಚಾಗಲಿದೆ. ಕಳೆ ತೆಗೆಯಲು ಅನುದಾನ ಕಡಿಮೆ. ಒಟ್ಟಾರೆಯಾಗಿ ಕಳೆ ತೆರವು ಮಾಡಲು 1200 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಸಿಎಂ ಹಾಗು ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಅನುದಾನ ಹೆಚ್ಚಿಸಲು ಕ್ರಮ ವಹಿಸಲಾಗುತ್ತದೆ. ಆದ್ಯತೆ ಮೇರೆಗೆ ಕಳೆ ತೆಗೆಯಲು ಕ್ರಮ ವಹಿಸಿ ವನ್ಯಜೀವಿಗಳ ಮೇವಿಗೆ ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.