ಬೆಳಗಾವಿ/ಬೆಂಗಳೂರು:- ಬೆಳಗಾವಿ ಅಧಿವೇಶನದಲ್ಲಿ 18 ಬಿಲ್ಗಳ ಮಂಡನೆ ಬಗ್ಗೆ ಚರ್ಚೆ ಮಾಡಲಾಗಿದ್ದು, ವಿಪಕ್ಷಗಳಿಂದ ಅಧಿವೇಶನ ವಿಸ್ತರಣೆಗೆ ಮನವಿ ಮಾಡಲಾಗಿದೆ.
ವಿಧಾನಸಭೆ ಕಲಾಪದಲ್ಲಿ 18 ಮಸೂದೆಗಳ ಮಂಡನೆಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸ್ಪೀಕರ್ ಯು ಟಿ ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 18 ಮಸೂದೆ ಮಂಡನೆ ಸಂಬಂಧ ಚರ್ಚೆ ನಡೆಸಲಾಯಿತು.
ಮುಂದಿನ ವಾರದಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಮಧ್ಯಾಹ್ನದ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬರ ನಿರ್ವಹಣೆ ಸಂಬಂಧ ಸದನಕ್ಕೆ ಮಾಹಿತಿ ನೀಡಲಿದ್ದಾರೆ. ಬಳಿಕ ಪ್ರತಿಪಕ್ಷಗಳು ಬರ ಸಂಬಂಧ ಚರ್ಚೆಗೆ ಕೋರಿ ಸಲ್ಲಿಸಿರುವ ನಿಲುವಳಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು.
ಇದೇ ವೇಳೆ ಪ್ರತಿಪಕ್ಷಗಳು ಬೆಳಗಾವಿ ಅಧಿವೇಶನವನ್ನು ಒಂದು ವಾರ ಕಾಲ ವಿಸ್ತರಿಸುವಂತೆ ಕೋರಿದರು. ಈ ಬಗ್ಗೆ ಮುಂದಿನ ಬಿಎಸಿ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಯಿತು.
ಕರ್ನಾಟಕ ಕರಾವಳಿ ಅಭಿವೃದ್ಧಿ ನಿಗಮ ತಿದ್ದುಪಡಿ ವಿಧೇಯಕ 2021, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ 2023, ವೈದ್ಯಕೀಯ ಪದವೀಧರ ಕಡ್ಡಾಯ ಗ್ರಾಮೀಣ ಸೇವೆ ತಿದ್ದುಪಡಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ, ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ವಿಧೇಯಕ, ಕರ್ನಾಟಕ ಪರಿಶಿಷ್ಟ ಜಾತಿ ಪಂಗಡಗಳ ಉಪ ಮಂಜೂರತಿ ಮಸೂದೆ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಬಿಲ್, ಶ್ರೀ ರೇಣುಕಾ ಎಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚನೆ ವಿಧೇಯಕಗಳು ಇವೆ.