ಬೆಂಗಳೂರು: ಅವಧಿ ಮೀರಿ ಹೋಟೆಲ್ ತೆರೆದಿದ್ದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್ಐ ಜೊತೆ ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆಯೊಡ್ಡಿದ್ದ ಮೂವರು ಆರೋಪಿಗಳನ್ನು ಅನ್ನಪೂರ್ಣೆಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುದ್ದಿನಪಾಳ್ಯ ಮುಖ್ಯ ರಸ್ತೆಯಲ್ಲಿರುವ ಅಶ್ವ ಹೋಟೆಲ್ ಮಾಲೀಕ ಸಂಜೀವ್ ಗೌಡ, ಕ್ಯಾಷಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಬಂಧಿತರು.ಮೂವರು ಮಹಿಳಾ ಪಿಎಸ್ಐ ಪ್ರತಿಮಾ ಅವರಿಗೆ ಜೀವ ಬೆದರಿಕೆಯೊಡ್ಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಡಿ. 1ರಂದು ರಾತ್ರಿ ಪಿಎಸ್ಐ ಪ್ರತಿಮಾ ಗಸ್ತಿನಲ್ಲಿದ್ದರು. ತಡರಾತ್ರಿ 1:30 ಗಂಟೆಯಾದರೂ ಹೋಟೆಲ್ ತೆರೆದಿತ್ತು. ಅದನ್ನು ಪ್ರಶ್ನಿಸಿದ್ದ ಪ್ರತಿಮಾ, ಹೋಟೆಲ್ ಬಂದ್ ಮಾಡಲು ಸೂಚಿಸಿದ್ದರು. ಅದಕ್ಕೆ ಒಪ್ಪದ ಮಾಲೀಕ ಹಾಗೂ ಇತರರು, ’24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ಇದೆ’ ಎಂದು ವಾದಿಸಿದ್ದರು.
ಒತ್ತಾಯದಿಂದ ಹೋಟೆಲ್ ಬಂದ್ ಮಾಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಬೆದರಿಕೆಯೊಡ್ಡಿದ್ದರು.ವಿಷಯ ತಿಳಿದು ಸ್ಥಳಕ್ಕೆ ಹೋಗಿದ್ದ ಹೆಚ್ಚುವರಿ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದೆ. ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.