ಬೆಂಗಳೂರು: ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ (L.R Shivarame Gowda) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಎಫ್ಐಆರ್ ದಾಖಲಿಸಿದೆ.
ನಕಲಿ ದಾಖಲೆ ಸೃಷ್ಟಿಸಿ 12.48 ಕೋಟಿ ಲೋನ್ (Loan Cheating) ಪಡೆದು ವಂಚನೆ ಮಾಡಿರುವ ಆರೋಪದ ಎಲ್ ಆರ್ ಶಿವರಾಮೇಗೌಡ ಸೇರಿ ಏಳು ಮಂದಿ ವಿರುದ್ಧ ಕೇಸ್ ಹಾಕಲಾಗಿದೆ.
ಎಂಜಿ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಶಿವರಾಮೇ ಗೌಡರು ಲೋನ್ ಪಡೆದಿದ್ದರು. ಇದೀಗ ಈ ಸಾಲದ ಹಣ ಬೇರೆಡೆ ವರ್ಗಾಯಿಸಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿರುವ ಕುರಿತು ಬ್ಯಾಂಕ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಶಿವರಾಮೇಗೌಡ, ಪತ್ನಿ ಸುಧಾ, ಮಗ ಚೇತನ್ ಗೌಡ, ಶಿವರಾಮೇಗೌಡ ಸೊಸೆ ಹಾಗೂ ರಾಯಲ್ ಕಂಕರ್ಡ್ ಎಜುಕೇಷನಲ್ ಟ್ರಸ್ಟ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಐಪಿಸಿ ಸೆಕ್ಷನ್ 120b (ಕ್ರಿಮಿನಲ್ ಪಿತೂರಿ), 420 (ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ಫೋರ್ಜರಿ) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಿಬಿಐ ಇನ್ಸ್ ಪೆಕ್ಟರ್ ಸಿದ್ದಪ್ಪ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.