ಟೀಮ್ ಇಂಡಿಯಾ ಪರ ಟಿ-20 ಐ ಸ್ವರೂಪದಲ್ಲಿ ಫಿನಿಷರ್ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿರುವ ರಿಂಕು ಸಿಂಗ್ ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಚೊಚ್ಚಲ ಕರೆ ನೀಡಲಾಗಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಗುಜರಾತ್ ಟೈಟನ್ಸ್ ನ ಹೆಡ್ ಕೋಚ್ ಆಶಿಶ್ ನೆಹ್ರಾ, ಬಿಸಿಸಿಐ ಸೆಲೆಕ್ಟರ್ಸ್ ಗಳು ರಿಂಕು ಸಿಂಗ್ ಮೇಲೆ ಭರವಸೆ ಇಟ್ಟು ಸ್ಥಾನ ಕಲ್ಪಿಸಿದ್ದು ಆತ ಈ ಸ್ವರೂಪದ ಕ್ರಿಕೆಟ್ ನಲ್ಲೂ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20-ಐ ಸ್ವರೂಪದಲ್ಲಿ ಟೀಮ್ ಇಂಡಿಯಾ ಪರ ಫಿನಿಷರ್ ಪಾತ್ರ ವಹಿಸಿರುವ ರಿಂಕು ಸಿಂಗ್, ರಾಯ್ಪುರದಲ್ಲಿ ನಡೆದ 4ನೇ ಟಿ20-ಐ ಪಂದ್ಯದಲ್ಲಿ ತಮ್ಮ ಕೌಶಲ್ಯ ಹಾಗೂ ಆಕ್ರಮಣಕಾರಿ ಆಟದೊಂದಿಗೆ 29 ಎಸೆತಗಳಲ್ಲೇ 46 ರನ್ ಗಳಿಸಿದ್ದಲ್ಲದೆ 5ನೇ ವಿಕೆಟ್ ಗೆ ಜಿತೇಶ್ ಶರ್ಮಾ (35 ರನ್) ರೊಂದಿಗೆ 56 ರನ್ ಗಳ ಜೊತೆಯಾಟ ನೀಡಿ ತಂಡ 174 ರನ್ ಗಳಿಸಲು ನೆರವಾಗಿದ್ದರು. ಇದರಿಂದ ಟೀಮ್ ಇಂಡಿಯಾ 20 ರನ್ ಗಳ ಗೆಲುವು ಸಾಧಿಸಿ 3-1 ರಿಂದ ಸರಣಿ ಕೈವಶಪಡಿಸಿಕೊಂಡಿತು. ಅಲ್ಲದೆ ಮೊದಲೆರಡು ಪಂದ್ಯಗಳಲ್ಲಿ 22 ಹಾಗೂ 31 ರನ್ ಗಳಿಸಿ ವಿಕೆಟ್ ಕಳೆದುಕೊಳ್ಳದೆ ಅಜೇಯರಾಗಿ ಉಳಿದಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರಿಂಕು ಸಿಂಗ್ ಚೊಚ್ಚಲ ಕರೆ ಪಡೆದಿದ್ದು ಈ ಕುರಿತು ಜಿಯೋ ಸಿನಿಮಾದಲ್ಲಿ ಸಂವಾದ ನಡೆಸಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ, ಯುವ ಫಿನಿಷರ್ ರಣಜಿ ಟೂರ್ನಿಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ. ರಿಂಕು ಸಿಂಗ್ ಏಕದಿನಕ್ಕೆ ಆಯ್ಕೆ ಆಗಿರುವುದು ತಂಡಕ್ಕೆ ದೊಡ್ಡ ವರದಾನ ಆಗಿದೆ ಎಂದು ಹೇಳಿದ್ದಾರೆ.