ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟರ್ ಎಂದು ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್ ಬಣ್ಣಿಸಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಯ ಅವರ ಪೈಕಿ ಸರ್ವಶ್ರೇಷ್ಠ ಬ್ಯಾಟರ್ ಯಾರು ಎಂದು ಕೇಳಿದ ಪ್ರಶ್ನೆಗೆ ಜುನೈದ್ ಖಾನ್, ಹಿಟ್ ಮ್ಯಾನ್ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದ್ದಾರೆ.
ಪಾಕಿಸ್ತಾನದ ಪರ ಜುನೈದ್ ಖಾನ್ 22 ಟೆಸ್ಟ್, 76 ಏಕದಿನ ಹಾಗೂ 9 ಟಿ20-ಐ ಪಂದ್ಯಗಳನ್ನು ಆಡಿದ್ದಾರೆ. ರೋಹಿತ್ ಶರ್ಮಾ ಅವರು ಸಿಡಿಲಬ್ಬರದ ಬ್ಯಾಟಿಂಗ್ ಗೆ ಹೆಸರುವಾಸಿ ಆಗಿರುವುದರಿಂದಲೇ ಅವರನ್ನು ಹಿಟ್ ಮ್ಯಾನ್ ಎಂದು ಕರೆಯುತ್ತಾರೆ. 36ರ ಹರೆಯದ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಶಾಹಿದ್ ಅಫ್ರಿದಿ ಹಾಗೂ ಸ್ವಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ನಂತರ 300 ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿದ್ದಾರೆ.
“ನನ್ನ ಪ್ರಕಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರೇ ಟೀಮ್ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟರ್. ಆತ ಬ್ಯಾಟಿಂಗ್ ನಡೆಸುವ ಪರಿ ಗಮನಿಸಿದರೆ ಆತನ ಕ್ರಿಕೆಟ್ ಪುಸ್ತಕದಲ್ಲಿ ಎಲ್ಲ ರೀತಿಯ ಶಾಟ್ಸ್ ಗಳು ಅಡಗಿವೆ. ಆದ್ದರಿಂದಲೇ ಅವರನ್ನು ಹಿಟ್ ಮ್ಯಾನ್ ಎಂದು ಕರೆಯುವುದು. ಏಕದಿನ ಮಾದರಿಯಲ್ಲಿ 264 ರನ್ ಸಿಡಿಸಿದ್ದಾರೆ. ಅಲ್ಲದೆ ತಮ್ಮ ಬತ್ತಳಿಕೆಯಲ್ಲಿ ಮತ್ತೆರಡು ದ್ವಿಶತಕವನ್ನು ಸೇರಿಸಿಕೊಂಡಿದ್ದಾರೆ. ಸಮಯ ಬಂದಾಗ ಮತ್ತೊಂದು ದ್ವಿಶತಕ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಆದ್ದರಿಂದಲೇ ನನ್ನ ಮತ ರೋಹಿತ್ ಶರ್ಮಾಗೆ ಹಾಕುತ್ತೇನೆ,” ಎಂದು ಜುನೈದ್ ಖಾನ್ ಹೇಳಿದ್ದಾರೆ.