ಚಿತ್ರದುರ್ಗ: ತೆಲಂಗಾಣ (Telangana) ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ನೆರೆದಿದ್ದ ಕಾರ್ಯಕರ್ತರು ಮಾಜಿ ಸಚಿವ ಹೆಚ್. ಆಂಜನೇಯ (H.Anjaneya) ನೇತೃತ್ವದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದ ದೃಶ್ಯ ಎಲ್ಲರ ಕಣ್ಮನ ಸೆಳೆಯಿತು. ಬಳಿಕ ಮಾದ್ಯಮಗಳೊಂದಿಗೆ ಮಾಜಿ ಸಚಿವ ಆಂಜನೇಯ ಮಾತನಾಡಿದರು.
ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಬಂದ್ ಎಂದು ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದು ತೋರಿಸಿದೆ. ನಾವು ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಶ್ರಮಿಸಿದ ಹಿನ್ನೆಲೆಯಲ್ಲಿ ಈ ಬಾರಿ ನಮ್ ‘ಕೈ’ ಹಿಡಿದಿದ್ದಾರೆ. ಈ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಯನ್ನು ಬಿಟ್ಟಿ ಕಾರ್ಯಕ್ರಮ ಎಂದಿದ್ದರು. ಆದರೆ ಮದ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಬಿಟ್ಟಿ ಕಾರ್ಯಕ್ರಮ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು.
ಅಲ್ಲದೇ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಅನುಸರಿಸಿದೆ. ನಾವು ಗ್ಯಾರಂಟಿ ಭಾಗ್ಯ ಘೋಷಿಸಿದಾಗ, ಉಚಿತ ಯೋಜನೆಯಿಂದ ರಾಜ್ಯ ದಿವಾಳಿ ಎಂದು ಬಿಜೆಪಿಗರು ಹೇಳಿದ್ದರು. ಆದರೆ ಈಗ ಉಚಿತ ಯೋಜನೆ ಘೋಷಿಸಿ ಬಿಜೆಪಿಯವರು ದ್ವಂದ್ವ ನೀತಿ ಅನುಸರಿಸಿದ್ದಾರೆ ಎಂದು ಕಾಲೆಳೆದರು.