ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣೆಯ ಅಧಿಕೃತ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಸಿಎಂ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವನ್ನು ತಿಳಿಸಿದರು. ಗೆಲುವಿನಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದ ದೊಡ್ಡ ಪಾತ್ರ ಇದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ. ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ. ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢಗಳಲ್ಲಿ ಹಿನ್ನಡೆ ಆಗಿದೆ.