ಪ್ರತಿಯೊಬ್ಬರಿಗೂ ತಮ್ಮ ತ್ವಚೆಯನ್ನು ಸದಾ ಕಾಪಾಡಿಕೊಳ್ಳಬೇಕು ಅಂದುಕೊಳ್ಳುತ್ತಾರೆ. ಕೆಲವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುತ್ತಾರೆ. ಕೆಲವರು ತಮಗೆ ಗೊತ್ತಿರುವ ಟಿಪ್ಸ್ ಬಳಸಿ ತ್ವಚೆಯನ್ನು ಕಾಪಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರ ತ್ವಚೆಯೂ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಗಾಗ ನಾವು ಕೂಡ ನಮ್ಮ ತ್ವಚೆಗೆ ಆರೈಕೆ ಮಾಡಿಕೊಳ್ಳಬೇಕು.
ಮೊಸರು ತ್ವಚೆಗೆ ಒಳ್ಳೆಯ ಔಷಧಿಯಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಮೊಸರು ಇರುತ್ತದೆ. ಮೊಸರಿಯಲ್ಲಿರುವ ಅಂಶದಿಂದ ನಮ್ಮ ಆರೋಗ್ಯ ಮತ್ತು ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವ ಅಂಶ ಅದರಲ್ಲಿದೆ.
ಸುಂದರ ಮೊಗಕ್ಕೆ ಮೊಸರೆ ಮದ್ದು:
* ಎರಡು ಚಮಚ ಮೊಸರಿಗೆ ಚಿಟಿಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಬಳಿಕ ಅದನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ವಾರಕ್ಕೆ 2-3 ಬಾರಿ ಮಾಡಿದರೆ ಮುಖದಲ್ಲಿನ ಧೂಳು ಮತ್ತು ಕೊಳೆ ನಿವಾರಣೆಯಾಗುತ್ತದೆ.
* ಒಂದು ಚಮಚ ಮೊಸರನ್ನು ಮುಖಕ್ಕೆ ಹಚ್ಚಿ, ಮಸಾಜ್ ಮಾಡಿಕೊಳ್ಳಿ ಬಳಿಕ ಅರ್ಧ ಗಂಟೆ ನಂತರ ಮುಖವನ್ನು ತೊಳೆದರೆ ಕಪ್ಪುಕಲೆ ಮಾಯವಾಗಿ ಮುಖ ಸುಂದರವಾಗಿ ಕಾಣುತ್ತದೆ.
* ಎರಡು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ, ಮುಖಕ್ಕೆ ಹಚ್ಚಿ. ಬಳಿಕ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಒಣಚರ್ಮ ನಿವಾರಣೆಯಾಗುತ್ತದೆ.
* ಮೊಸರು ಅರ್ಧ ಕಪ್, 3 ಚಮಚ ತುರಿದ ಸೌತೆಕಾಯಿಯನ್ನು ಡಾರ್ಕ್ ಸರ್ಕಲ್ ಹಾಗೂ ಟ್ಯಾನ್ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. 15 ನಿಮಿಷದ ನಂತರ ತಣ್ಣಗಿರುವ ನೀರಿನಿಂದ ತೊಳೆಯಬೇಕು. ಈ ರೀತಿ ವಾರಕ್ಕೆ 2 ಬಾರಿ ಮಾಡುವುದರಿಂದ ಟ್ಯಾನ್ ಮತ್ತು ಚರ್ಮದ ಕಪ್ಪು ಕಡಿಮೆಯಾಗುತ್ತದೆ.
* ಒಂದು ಚಮಚ ಕಡಲೆ ಹಿಟ್ಟಿಗೆ 2 ಚಮಚ ಮೊಸರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಬೇಕು. ಇದು ಜಿಡ್ಡಿನ ಮತ್ತ ಸೂಕ್ಷ್ಮ ತ್ವಚೆಗೆ ಸೂಕ್ತವಾಗಿದೆ. ಜೊತೆಗೆ ತಾಜಾ ಕಾಂತಿಯನ್ನು ನೀಡುತ್ತದೆ.
* ಮೊಸರು ಕೂದಲಿನ ನೈಸರ್ಗಿಕ ಪೋಷಣೆ ನೀಡುತ್ತದೆ. ಆದ್ದರಿಂದ ಮೊಸರನ್ನು ಕೂದಲಿನ ಬುಡಕ್ಕೆ ಮಸಾಜ್ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ.
* 2 ಚಮಚ ಮೊಸರಿಗೆ 1 ಚಮಚ ಅರಶಿಣವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ, ಬಳಿಕ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
* ಮೆಹಂದಿ ಪುಡಿಗೆ ಮೊಸರು ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
* ಬೇಯಿಸಿದ ಆಲೂಗಡ್ಡೆ, 2 ಚಮಚ ಮೊಸರು ಮತ್ತು ಸ್ವಲ್ಪ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿ, ನಿಮ್ಮ ಮುಖವನ್ನು ತೊಳೆದುಕೊಂಡ ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಂತರ 20 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
* ನಿಂಬೆ ಸಿಪ್ಪೆ, ಕಿತ್ತಳೆ ಸಿಪ್ಪೆ ಒಣಗಿಸಿ, ಪುಡಿಮಾಡಿ ಮೊಸರಿನಲ್ಲಿ ಕಲಸಿ, ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖದ ಮೇಲಿನ ಕಲೆ ಕಡಿಮೆಯಾಗುತ್ತದೆ.