ಬೆಂಗಳೂರು:– ಶಿಕ್ಷಣ ಸಚಿವ ಜಿ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿದೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಮ್ಮ ಉಸ್ತುವಾರಿ ಸಚಿವರಿಗೆ ಅಹಂ ಜಾಸ್ತಿ. ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ನಾವು ಶಾಸಕರಲ್ವಾ ನಮಗೂ ಜವಾಬ್ದಾರಿ ಇಲ್ವಾ?. ನಾವು ಯಡಿಯೂರಪ್ಪನ ಮಕ್ಕಳನ್ನ ಸೋಲಿಸಬೇಕು. ರಾಘವೇಂದ್ರನನ್ನು ಸೋಲಿಸಬೇಕು ಅಂತ ಇದ್ದೇವೆ. ಆದರೆ ನಮ್ಮ ಸಚಿವರು ನಮ್ಮಲ್ಲೇ ಒಡಕು ಮೂಡಿಸ್ತಿದ್ದಾರೆ ಎಂದು ಕಿಡಿ ಕಾರಿದರು.
ಮಾಜಿ ಮುಖ್ಯಮಂತ್ರಿ ಮಗ, ಅವರ ತಂದೆ ಗರಡಿಯಲ್ಲಿ ಪಳಗಿದವರು ನಾವು. ಎಲ್ಲರನ್ನು ಒಗ್ಗೂಡಿಸಿ ಕರೆದೊಯ್ಯಬೇಕು. ಅವರೇ ಪಕ್ಷವನ್ನು ಒಡೆಯುವುದಲ್ಲ. ಶಿವಮೊಗ್ಗದಲ್ಲಿ ಪಕ್ಷ ಒಡೆದು ಎರಡು ಬಣವಾಗಿದೆ. ಅವರೇ ಅದಕ್ಕೆ ಕುಮ್ಮಕ್ಕು ನೀಡುವುದಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರು ಅನ್ನೋದು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಒಬ್ಬ ಪ್ರಬಲ ಆಕಾಂಕ್ಷಿ ಎಂದರು.