ಹುಬ್ಬಳ್ಳಿ: ಇಲ್ಲಿಯ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಭಾಭವನದಲ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮೂಲಸೌಕರ್ಯ ಕಲ್ಪಿಸುವ ಕುರಿತು ಚರ್ಚೆ ನಡೆಸಲಾಯಿತು.
ಸಂಘದ ಸದಸ್ಯರು ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಲ್ಲಿ ಮನವಿ ಮಾಡಿದರು.
ಕೈಗಾರಿಕಾ ವಸಾಹತು ಪ್ರದೇಶದ ಹಲವು ಘಟಕಗಳು ಮಹಾನಗರ ಪಾಲಿಕೆಗೆ ಬಹಳ ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸಿಲ್ಲ. ಪಾಲಿಕೆಯ ವತಿಯಿಂದ ಅಧಿಕಾರಿಗಳನ್ನು ಕಳುಹಿಸಿ ತೆರಿಗೆ ಸಂಗ್ರಹಣೆ ಮಾಡಲಾಗುವುದು. ಅಗತ್ಯ ಮೂಲಸೌಕರ್ಯಗಳ ಕುರಿತು ಮಾಹಿತಿ ನೀಡಿ. ಕಸ ವಿಲೇವಾರಿಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಮೇಯರ್ ವೀಣಾ ಬರದ್ವಾಡ ಮಾತನಾಡಿ ಅತಿ ಶೀಘ್ರದಲ್ಲಿ ಇಲ್ಲಿಯ ಕುಂದು ಕೊರತೆಗಳನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಗಿರೀಶ ನೆಲವಡಿ ಮಾತನಾಡಿ, ಕೈಗಾರಿಕಾ ವಲಯದಲ್ಲಿ ಬೀದೀಪ, ಯುಜಿಡಿ, ಹಾಗೂ ಘನತ್ಯಾಜ್ಯ ವಸ್ತು ಸಂಗ್ರಹಣೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು ಮೊದಲ ಆದ್ಯತೆಯಲ್ಲಿ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು. ಸಂಘದ ಗೌರವ ಕಾರ್ಯದರ್ಶಿ ಶಂಕರ ಹಿರೇಮಠ, ಜೆ. ಸಿ. ಮಠದ , ಪಾಲಿಕೆ ಉಪ ಆಯುಕ್ತ ಆನಂದ ಕಲ್ಲೊಳಿಕರ, ಕಂದಾಯ ಅಧಿಕಾರಿ ಎಂ. ಬಿ. ಸಬರದ, ಇತರರು ಇದ್ದರು.