ಬೆಂಗಳೂರು:- ವೈಜ್ಞಾನಿಕವಾಗಿ ಜಾತಿ ಗಣತಿ ವರದಿ ಸಿದ್ಧಪಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂದರು.
ವರದಿಯನ್ನು ಇನ್ನೂ ನಾವು ಸ್ವೀಕಾರ ಮಾಡಿಲ್ಲ. ವರದಿ ಸ್ವೀಕರಿಸಲೆಂದೇ ಆಯೋಗದ ಅವಧಿಯನ್ನು 2 ತಿಂಗಳು ಮುಂದುವರೆಸಲಾಗಿದೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಯಾರೂ ಏನೇ ಹೇಳಿದರೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೇ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಸಮಾಜದಲ್ಲಿ ಅವಕಾಶ ವಂಚಿತ ಜನರಿಗೆ, ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವವರು, ಸಾಮಾಜಿಕ ನ್ಯಾಯದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ. ನಿಮ್ಮೊಂದಿಗೂ ಇರುತ್ತೇವೆ ಎಂದರು.
ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಸಣ್ಣ ರೈತರು ಬಹಳ ಕಡಿಮೆ ಇದ್ದಾರೆ ಎಂದರು.