ಬೆಂಗಳೂರು:- ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ, ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಮಂಜುಳಾ ಎಂಬಾಕೆಯನ್ನು ಬಂಧಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಆಗಿರುವ ಡಾ.ಚಂದನ್ ಬಲ್ಲಾಳ್ ಒಡೆತನದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ, ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲಸ ತೊರೆದು ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ತಲೆಮರೆಸಿಕೊಂಡಿದ್ದ ಮಂಜುಳಾಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸದ್ಯ ಆಕೆ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಿಂದಲೇ ವಶಕ್ಕೆ ಪಡೆದಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ಹತ್ತಕ್ಕೇರಿದಂತಾಗಿದೆ.
ಹದಿನಾಲ್ಕರಿಂದ ಹದಿನೆಂಟು ವಾರಗಳ ಅವಧಿಯಲ್ಲಿ ಭ್ರೂಣ ಲಿಂಗ ಪತ್ತೆಯಾಗುತ್ತದೆ. ಪ್ರಾರಂಭದಲ್ಲಿ ಗರ್ಭಿಣಿಯ ಬ್ಲಡ್ ಚೆಕ್ ಮಾಡುತ್ತಿದ್ದ ಆರೋಪಿಗಳು ನಂತರ ಆಕೆಗೆ ಗರ್ಭಪಾತದ ಮಾತ್ರೆ ನೀಡುತ್ತಿದ್ದರು. ಬಳಿಕ ರಕ್ತಸ್ರಾವವಾಗಿ ಭ್ರೂಣ ಹೊರ ಬರುತ್ತಿತ್ತು. ಈ ವೇಳೆ ಚಂದನ್ ಮತ್ತು ಮಂಜುಳಾ ಡೆಲಿವರಿ ಮಾಡಿಸಿದ ರೀತಿಯಲ್ಲಿ ಭ್ರೂಣ ಹೊರ ತೆಗೆಯುತ್ತಿದ್ದರು. ಈ ಕೆಲಸದಲ್ಲಿ ರಿಜ್ಮಾ ಹಾಗೂ ಮಂಜುಳಾ, ವೈದ್ಯ ಚಂದನ್’ಗೆ ನೆರವಾಗುತ್ತಿದ್ದರು. ಹತ್ಯೆಯ ನಂತರ ಭ್ರೂಣವನ್ನು ನದಿಗೆ ಎಸೆಯಲಾಗುತ್ತಿತ್ತು. ‘ಕಳೆದ ಒಂದು ವರ್ಷದಿಂದ ತಾನು ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 70 ಗರ್ಭಪಾತ ಮಾಡಿರುವುದಾಗಿ’ ಪೊಲೀಸರ ಮುಂದೆ ಮಂಜುಳಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.