ಮಂಡ್ಯ :- ಜಿಲ್ಲೆಯ ರೈತರು ತೀವ್ರ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲೇ ರೈತರಿಂದ ಖರೀದಿಸುವ ಹಾಲಿನ ದರವನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ( ಮನ್ ಮುಲ್ )ಏಕಾಏಕಿ 1.50 ಪೈಸೆಯನ್ನು ಕಡಿತಗೊಳಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಡಿ.1 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ಗೆ ಸರಿ ಸುಮಾರು 1.50 ಪೈಸೆಗಳನ್ನು ಕಡಿತಗೊಳಿಸಿದೆ.
ಈ ಕುರಿತು ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಪ್ರಕಟಣೆ ನೀಡಿದ್ದು, ಒಕ್ಕೂಟದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ದರ ಪರಿಷ್ಕರಣೆ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಿದೆ.
ಹಾಲಿನ ಗುಣಮಟ್ಟ ಶೇ.4.0 ಜಿಡ್ಡು ಮತ್ತು ಶೇ.8.5 ಜಿಡ್ಡೇತರ ಘನಾಂಶದ ಹೊಂದಿರುವ ಸಂಘದಿಂದ ಖರೀದಿಸುವ ಪ್ರತಿ ಲೀ. ಹಾಲಿಗೆ ₹ 34.40 ಬದಲು ₹ 32.90 ಹಾಗೂ ಉತ್ಪಾದಕರಿಗೆ ನೀಡುತ್ತಿದ್ದ ₹ 33.50ರ ಬದಲು ₹ 32 ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದಿದ್ದಾರೆ.
ಮನ್ ಮುಲ್ ಒಕ್ಕೂಟದ ಅಡಿಯಲ್ಲಿ 1293 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅವುಗಳಿಂದ ಪ್ರತಿನಿತ್ಯ ಸರಾಸರಿ 961852 ಕೆಜಿ ಹಾಲು ಸಂಗ್ರಹಿಸಲಾಗುತ್ತಿದೆ. ಅದರಲ್ಲಿ 370579 ಲೀ ಸ್ಯಾಚೆಟ್ ಹಾಲು, 75599 ಕೆಜಿ ಮೊಸರು, 57065 ಲೀ. ಯು ಎಚ್ ಟಿ ಹಾಲು ತಯಾರಿಸಿ ಉಳಿಕೆ ಹಾಲಿನಲ್ಲಿ 183203 ಹಾಲನ್ನು ಅಂತರಡೇರಿ ಮತ್ತು ಅಂತರಾಜ್ಯಗಳಿಗೆ ಮಾರಾಟ ಮಾಡಿ ಸರಾಸರಿ 275406 ಲೀ ಹೆಚ್ಚುವರಿ ಹಾಲನ್ನು ಹಾಲಿನಪುಡಿ ಮಾಡಲಾಗುತ್ತಿದೆ. ಸದ್ಯ 879 ಮೆಟ್ರಿಕ್ ಟನ್ ಬೆಣ್ಣೆ ಮತ್ತು 3229.50 ಟನ್ ಹಾಲಿನ ಪುಡಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತಾತ್ವರ ಎದುರಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಏಕಾಏಕಿ ಪ್ರತಿ ಲೀಟರ್ಗೆ 1.50 ಪೈಸೆ ರೂ. ಕಡಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ : ಗಿರೀಶ್ ರಾಜ್, ಮಂಡ್ಯ