ಬೆಂಗಳೂರು:- ಎಕ್ಸಿಟ್ ಪೋಲ್ ಮೇಲೆ ವೈಯಕ್ತಿಕವಾಗಿ ನನಗೆ ನಂಬಿಕೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಕುರಿತು ಕೇಳಿದ ಪ್ರಶ್ನೆಗೆ, ‘ಪಕ್ಷದ ಅಧ್ಯಕ್ಷ ಹೊರತಾಗಿ ವೈಯಕ್ತಿಕವಾಗಿ ನನಗೆ ಎಕ್ಸಿಟ್ ಪೋಲ್ಗಳ ಮೇಲೆ ನಂಬಿಕೆ ಇಲ್ಲ ಎಂದರು.
ನಮ್ಮ ರಾಜ್ಯದಲ್ಲಿ ನಾನು ಏನು ಮಾಡಿದ್ದೆ, ಯಾವ ರೀತಿ ಎಕ್ಸಿಟ್ ಪೋಲ್ ಗಳು ಬಂದವು ಎಂಬುದು ನನಗೆ ಗೊತ್ತಿದೆ. ಯಾರು ಕ್ಷೇತ್ರಗಳಲ್ಲಿ ಸುತ್ತಾಡಿರುತ್ತಾರೋ ಅವರಿಗೆ ಮಾತ್ರ ವಾಸ್ತವಾಂಶ ತಿಳಿದಿರುತ್ತದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾದರಿಗಳು ಅಲ್ಪಪ್ರಮಾಣದ್ದಾಗಿರುತ್ತದೆ. ಅದು ಇಡೀ ರಾಜ್ಯದ ಚಿತ್ರಣವನ್ನು ನಿರ್ಧರಿಸುವುದಿಲ್ಲ’ ಎಂದು ತಿಳಿಸಿದರು.
ಕೆಲ ರಾಜ್ಯಗಳಲ್ಲಿ ನೇರಹಣಾಹಣಿ ಇದ್ದು, ಆ ರಾಜ್ಯಗಳ ಶಾಸಕರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ‘ಈ ಬಗ್ಗೆ ಗೊತ್ತಿಲ್ಲ. ರಾಜಸ್ಥಾನ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಕ್ಷ ಹೇಳಿದ ಕೆಲಸ ಮಾಡಬೇಕಾಗುತ್ತದೆ. ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ’ ಎಂದು ತಿಳಿಸಿದರು.