ಬೆಂಗಳೂರು: ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಟಿ20ಯಿಂದ ದೂರ ಉಳಿದಿರುವ ರೋಹಿತ್, ಈಗ ಸಂಪೂರ್ಣವಾಗಿ ಚುಟುಕು ಕ್ರಿಕೆಟ್ ತೊರೆಯುತ್ತಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಆ ಮೂಲಕ ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಆದರೆ ಈ ಎಲ್ಲಾ ಸುದ್ದಿಗಳು ಸುಳ್ಳು ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಇದರ ನಡುವೆ ಬಿಸಿಸಿಐ ನಾಯಕ ರೋಹಿತ್ ಶರ್ಮಾ ಅವರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಭಾರತ ಟಿ20 ತಂಡಕ್ಕೆ ನಾಯಕನನ್ನು ಬದಲಾಯಿಸುವ ಯಾವುದೇ ಉದ್ದೇಶವಿಲ್ಲ. ನೀವೇ ಮುಂದುವರಿಯಬೇಕು ಎಂದು ಬಿಸಿಸಿಐ ರೋಹಿತ್ ಶರ್ಮಾಗೆ ಸ್ಪಷ್ಟಪಡಿಸಿದೆ ಎಂದು ವಿಶ್ವಾಸನೀಯ ಮೂಲಗಳು ಹೇಳಿವೆ.
ರೋಹಿತ್ ಹೊರತುಪಡಿಸಿ ಇತರ ಆಟಗಾರರಿಗೆ ನಾಯಕತ್ವ ನೀಡುವ ಉದ್ದೇಶ ಬಿಸಿಸಿಐಗೆ ಸದ್ಯಕ್ಕೆ ಇಲ್ಲ. ರೋಹಿತ್ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವ ಬಿಸಿಸಿಐ ಈ ಬಗ್ಗೆ ಅವರಿಗೆ ಸ್ಪಷ್ಟವಾಗಿ ಹೇಳಿದೆ ಎಂದು ವರದಿಯಾಗಿದೆ.