ಮುಂಬೈ: ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ತವರು ಮುಂಬೈ ಇಂಡಿಯನ್ಸ್ (Mumbai Indians) ಸೇರ್ಪಡೆಗೊಂಡ ಬಳಿಕ ಗುಜರಾತ್ ಟೈಟಾನ್ಸ್ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಹೆಗಲಿಗೆ ನಾಯಕತ್ವದ ಹೊಣೆ ನೀಡಲಾಗಿದೆ.
ಈ ಬಗ್ಗೆ ಗುಜರಾತ್ ಟೈಟಾನ್ಸ್ (GujaratTaitans) ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಶುಭಮನ್ ಗಿಲ್ ಸಹ ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ. ಗುಜರಾತ್ ಟೈಟಾನ್ಸ್ನ ನಾಯಕತ್ವ ವಹಿಸಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಇಂತಹ ಉತ್ತಮ ತಂಡವನ್ನು ಮುನ್ನಡೆಸಲು ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಿಟ್ಟು ನಾಯಕತ್ವದ ಹೊಣೆ ನೀಡಿದೆ. ಇದನ್ನು ಕೇವಲ ಧನ್ಯವಾದ ಹೇಳಿ ಮುಗಿಸಲಾರೆ. ಈ ಟೂರ್ನಿಯನ್ನು ಸ್ಮರಣೀಯವಾಗಿಸೋಣ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ಪರ ಆಡಿರುವ 2 ಆವೃತ್ತಿಯ 33 ಇನ್ನಿಂಗ್ಸ್ಗಳಲ್ಲಿ, 47.34 ಸರಾಸರಿಯಲ್ಲಿ 1,373 ರನ್ ಬಾರಿಸಿದ್ದಾರೆ. ಅದರಲ್ಲೂ 2023ರ 16ನೇ ಆವೃತ್ತಿಯ ಐಪಿಎಲ್ನಲ್ಲಿ 17 ಪಂದ್ಯಗಳಿಂದ 59.33 ಸರಾಸರಿಯಲ್ಲಿ ಒಟ್ಟು 890 ರನ್ ಬಾರಿಸಿದ್ದರು. ಇದರಲ್ಲಿ 3 ಶತಕ, 4 ಅರ್ಧ ಶತಕಗಳೂ ಸೇರಿತ್ತು. ಈ ಆವೃತ್ತಿಯಲ್ಲಿ ಒಟ್ಟು 890 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜೊತೆಗೆ ಅತಿಹೆಚ್ಚು ರನ್ ಗಳಿಸಿದ್ದಕ್ಕಾಗಿ 10 ಲಕ್ಷ ರೂ. ಬಹುಮಾನವನ್ನೂ ಗಿಟ್ಟಿಸಿಕೊಂಡರು. ಅದರಲ್ಲೂ ಸೆಮಿಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ್ದ ಗಿಲ್ 60 ಎಸೆತಗಳಲ್ಲೇ 129 ರನ್ ಬಾರಿಸಿದ್ದರು. ಇದರಿಂದ ತಂಡವು ಅಧಿಕ ರನ್ಗಳ ಜಯ ಸಾಧಿಸಿತ್ತು.