ಪೀಣ್ಯ ದಾಸರಹಳ್ಳಿ:’ ಈ ಕ್ಷೇತ್ರದಲ್ಲಿ ಈ ಹಿಂದೆ (ಎಲೆಕ್ಷನ್ ಗೆ ಮೊದಲು) ಕಾಮಗಾರಿ ಕೆಲಸದ ಪೂರ್ವ ಆದೇಶ ಇಲ್ಲದೆ ಪೂಜೆ ಸಲ್ಲಿಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು.
ಸೋಮಶೆಟ್ಟಿಹಳ್ಳಿ ರಸ್ತೆ, ಚಿಕ್ಕಬಾಣಾವರದಲ್ಲಿ 30 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಸಾರ್ವಜನಿಕ ಗ್ರಂಥಾಲಯ ಅನಾವರಣ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದ ಮೈದಾನದಲ್ಲಿ 80 ಲಕ್ಷ ವೆಚ್ಚದ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಎಲೆಕ್ಷನ್ ಗೆ ಮೊದಲು ಆಸ್ಪತ್ರೆ ಕಟ್ಟಡಕ್ಕೆ ಇಲ್ಲಿ ಪೂಜೆ ಸಲ್ಲಿಸಲಾಗಿದೆ. ಆದರೆ ಗುತ್ತಿಗೆದಾರ ಕಟ್ಟಡ ನಿರ್ಮಿಸಿಲ್ಲ, ಕೆಲಸದ ಆದೇಶ ಇಲ್ಲದೆ ಪೂಜೆ ಮಾಡಿದ್ದಾರೆ. ಇತ್ತೀಚಿಗೆ ಅದರ ಕಾಮಗಾರಿ ಆದೇಶ ಬಂದಿದೆ ಕೆಲವೊಬ್ಬ ಗುತ್ತಿಗೆದಾರರು ಆಟ ಆಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದರು.
ಈ ಭಾಗದಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ನೆಲೆಸಿದ್ದಾರೆ. ಅವರ ಅನುಕೂಲಕ್ಕೆ ಇನ್ನು 9 ತಿಂಗಳಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಸಿಗುತ್ತದೆ, ಅದಕ್ಕಾಗಿ ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದರು.
ಚಿಕ್ಕಬಾಣಾವರದ ಸಾರ್ವಜನಿಕ ಗ್ರಂಥಾಲಯದಲ್ಲಿ ಕುಳಿತುಕೊಳ್ಳಲು 50 ಆಸನಗಳಿದ್ದು,13 ಸಾವಿರ ವಿವಿಧ ಪುಸ್ತಕಗಳು, ಮ್ಯಾಗಜಿನ್, ನ್ಯೂಸ್ ಪೇಪರ್ ಎಲ್ಲಾ ಸೌಲಭ್ಯವಿದೆ. ಇಲ್ಲಿ ಒಳ್ಳೆಯ ವಾತಾವರಣ, ಗಾಳಿ ಬೆಳಕು ಇದೆ. ಇಲ್ಲಿ ಸದಸ್ಯರಾದವರು ಪುಸ್ತಕ ಮನೆಗೆ ತೆಗೆದುಕೊಂಡು ಓದಿ ಹಿಂತಿರುಗಿಸಬಹುದು’ ಎಂದು ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ತಿಳಿಸಿದರು.
ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಗಣೇಶ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಪುರಸಭೆ ಮುಖ್ಯ ಅಧಿಕಾರಿ ಎಚ್.ಎ. ಕುಮಾರ್, ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ ಚಿಕ್ಕಣ್ಣ ಚಿಕ್ಕಬಾಣಾವರ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಭಾಗ್ಯಮ್ಮ, ಮಹಮ್ಮದ್ ಕಬೀರ್ ಅಹಮ್ಮದ್ , ವೆಂಕಟೇಶ್ ,ಗೀರಿಶ್, ಸಲೀಂ, ನವೀನ್ ಮುಂತಾದವರಿದ್ದರು.