ಸರಕಾರಿ ಸೌಲಭ್ಯ ಪಡೆಯುವ ಉದ್ದೇಶದಿಂದ ತಾವು ಸಣ್ಣ ರೈತರು ಎಂದು ತೋರಿಸಿಕೊಳ್ಳುವ ಭರದಲ್ಲಿ ರಾಜ್ಯದ ಕೃಷಿಕರು ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಒಡೆತನದಲ್ಲಿರುವ ಸಂಪೂರ್ಣ ಕೃಷಿ ಭೂಮಿಯ ಮಾಹಿತಿ ಮರೆಮಾಚಿ, ಕೆಲವೇ ಹೆಕ್ಟೇರ್ ಭೂಮಿ ಮಾಹಿತಿ ನೀಡುತ್ತಿದ್ದಾರೆ.
ಇದರಿಂದ ಬರ ಪರಿಹಾರ ಪಡೆಯಲು ರೈತರಿಗೆ ತೊಡಕಾಗುವ ಅಪಾಯ ಎದುರಾಗಿದೆ.
ರಾಜ್ಯಾದ್ಯಂತ ಬರ ಎದುರಾಗಿದ್ದು, ಬರ ಪರಿಹಾರ ಪಡೆಯಬೇಕಾದರೆ ರೈತರು ಫ್ರೂಟ್ಸ್ ಐಡಿ (ಎಫ್ಐಡಿ) ಕಡ್ಡಾಯವಾಗಿ ಹೊಂದಿರಬೇಕು ಎಂದಿರುವ ಸರಕಾರ, ಎಫ್ಐಡಿ ನೋಂದಣಿ ಗಡುವನ್ನು ನ.30ರವರೆಗೆ ವಿಸ್ತರಿಸಿದೆ. ಆದರೆ, ನೋಂದಣಿ ನಿರೀಕ್ಷೆಯಂತೆ ಆಗುತ್ತಿಲ್ಲ. ಜತೆಗೆ, ತಾವು ದೊಡ್ಡ ರೈತರೆಂದು ತೋರಿಸಿಕೊಂಡರೆ ಸರಕಾರದಿಂದ ಸಹಾಯಧನ, ಗೌರವಧನ, ಸಾಲ ಮೊದಲಾದ ಸೌಲಭ್ಯಸಿಗುವುದಿಲ್ಲ ಎಂಬ ಕಾರಣಕ್ಕೆ ರೈತರು ಪೂರ್ಣ ಮಾಹಿತಿ ನೀಡುತ್ತಿಲ್ಲ.
ರೈತರೇ ಗಮನಿಸಿ.. ಬೆಳೆ ಪರಿಹಾರ ಹಣ ಬಂದಿಲ್ವಾ..? ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ
ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ, ತಮ್ಮ ಎಲ್ಲ ಜಮೀನುಗಳ ಪಹಣಿ, ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ ನೀಡಿ ಎಫ್ಐಡಿ ಮಾಡಿಸಬೇಕು. ಈಗಾಗಲೇ ಎಫ್ಐಡಿ ಹೊಂದಿರುವ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೆ ನಂಬರ್ಗಳ ಜಮೀನನ್ನು ಎಫ್ಐಡಿಗೆ ಲಿಂಕ್ ಮಾಡಬೇಕು. ಎಲ್ಲ ರೈತರೂ ಎಫ್ಐಡಿ ಮಾಡಿಸುವ ನಿಟ್ಟಿನಲ್ಲಿ ಜಾಗೃತಿ ಅಬಿಯಾನ ನಡೆಸುತ್ತಿದ್ದೇವೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತಂತೆ ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಳವಳ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ದಾವಣಗೆರೆಯಲ್ಲಿ ಸಚಿವರು ಅಧಿಕಾರಿಗಳ ಸಭೆ ನಡೆಸಿದಾಗ ಎಫ್ಐಡಿ ಮತ್ತು ಹಿಡುವಳಿದಾರರ ಸಂಖ್ಯೆಗೆ ಹೊಂದಾಣಿಕೆ ಆಗಲಿಲ್ಲ. ಸಣ್ಣ ರೈತರು ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ಕೃಷಿಕರು ತಮ್ಮ ಪೂರ್ಣ ಕೃಷಿ ಭೂಮಿಯ ಮಾಹಿತಿ ಫ್ರೂಟ್ಸ್ನಲ್ಲಿ ದಾಖಲಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಎಫ್ಐಡಿ ಇಲ್ಲದಿದ್ದರೆ ಹಾಗೂ ಪೂರ್ಣ ಪ್ರಮಾಣದ ಭೂಮಿ ಮಾಹಿತಿ ನೀಡದಿದ್ದರೆ ರೈತರಿಗೆ ಸಂಪೂರ್ಣ ಬರ ಪರಿಹಾರ ಸಿಗುವುದಿಲ್ಲ. ಕಾರಣ, ತಮ್ಮ ಒಡೆತನದ ಅಷ್ಟೂ ಕೃಷಿ ಭೂಮಿ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸುವಂತೆ ಕೃಷಿಕರಿಗೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು