ನವದೆಹಲಿ: ಚುನಾವಣಾ ಮಾದರಿ ನೀತಿ ಸಂಹಿತೆ (Code Of Conduct) ಉಲ್ಲಂಘನೆ ಆರೋಪ ಹಿನ್ನೆಲೆ ರೈತ ಬಂಧು ಯೋಜನೆ (Rythu Bandhu Scheme) ಮುಂದೂಡುವಂತೆ ತೆಲಂಗಾಣ (Telangana) ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ (Election Commission) ಸೂಚನೆ ನೀಡಿದೆ. ಮತದಾನಕ್ಕೂ (Voting) ಮುನ್ನ ರೈತರ ಅಕೌಂಟ್ಗೆ ಹಣ ಹಾಕಿ ಅದರ ಲಾಭ ಪಡೆಯಲು ಬಿಆರ್ಎಸ್ (BRS) ಚಿಂತಿಸಿತ್ತು.
ಇದಕ್ಕೂ ಮೊದಲು ಯೋಜನೆಗೆ ಅನುಮತಿ ನೀಡಿದ್ದ ಕೇಂದ್ರ ಚುನಾವಣಾ ಆಯೋಗ ಪ್ರಚಾರಕ್ಕೆ ಬಳಸಿಕೊಳ್ಳದಂತೆ ಷರತ್ತು ವಿಧಿಸಿತ್ತು. ಅದಾಗ್ಯೂ ಬಿಆರ್ಎಸ್ನಿಂದ ಸ್ಪರ್ಧಿಸಿರುವ ರಾಜ್ಯ ಹಣಕಾಸು ಸಚಿವ ಟಿ ಹರೀಶ್ ರಾವ್ ಚುನಾವಣಾ ಪ್ರಚಾರಗಳಿಗೆ ಯೋಜನೆಯನ್ನು ಬಳಸಿಕೊಂಡಿದ್ದರು. ಈ ಬಗ್ಗೆ ಪ್ರತಿಪಕ್ಷಗಳಿಂದ ದೂರು ದಾಖಲಾದ ಹಿನ್ನೆಲೆ ಯೋಜನೆಗೆ ತಾತ್ಕಾಲಿಕ ತಡೆ ನೀಡಿದೆ.
2018ರಲ್ಲಿ ಪ್ರಾರಂಭವಾದ ರೈತ ಬಂಧು ಯೋಜನೆಯು ರೈತರಿಗೆ ಅನಿಶ್ಚಿತತೆಗಳನ್ನು ಪೂರೈಸಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಅನುವು ಮಾಡಿಕೊಡಲು ಒಂದು ಬೆಳೆ ಋತುವಿಗೆ ಎಕರೆಗೆ 5,000 ರೂ. ನಗದು ಹಣವನ್ನು ರೈತರ ಬ್ಯಾಂಕ್ ಖಾತೆಗೆ ಸರ್ಕಾರ ವರ್ಗಾಯಿಸುತ್ತದೆ. ಕೆಲವು ಷರತ್ತುಗಳ ಅಡಿಯಲ್ಲಿ ಅಕ್ಟೋಬರ್-ಜನವರಿ ಅವಧಿಯಲ್ಲಿ ತಮ್ಮ ರಾಬಿ ಬೆಳೆಗಳನ್ನು ಬೆಳೆಯಲು ರೈತರಿಗೆ ಹಣಕಾಸಿನ ನೆರವು ವಿತರಣೆಗಾಗಿ ತೆಲಂಗಾಣ ಸರ್ಕಾರಕ್ಕೆ ಆಯೋಗ ಅನುಮತಿ ನೀಡಿತ್ತು.