ವಿಜಯನಗರ: ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನೋವಿನಿಂದ ನಡು ರಸ್ತೆಯಲ್ಲಿ ನರಳಾಡಿರುವ ಘಟನೆ ಕೂಟ್ಟೂರು ಪಟ್ಟಣದಲ್ಲಿ ನಡೆದಿದೆ. ಮನಕಲುಕುವ ದೃಶ್ಯಕ್ಕೆ ಕೂಟ್ಟೂರು ಪಟ್ಟಣ ಸಾಕ್ಷಿಯಾಗಿದೆ. ಬಸವರಾಜಪ್ಪ ಗಾಯಗೊಂಡ ವ್ಯಕ್ತಿಯಾಗಿದ್ದು, ಬಸವರಾಜಪ್ಪ ಅವರು ಇಂದು ಬೆಳಿಗ್ಗೆ ಕೊಟ್ಟೂರು ಬಸ್ ನಿಲ್ದಾಣ ಬಳಿ ಹೋಗುತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಕೆಎಸ್ಆರ್ಟಿಸಿ ಬಸ್ ಬಸವರಾಜಪ್ಪ ಅವರಿಗೆ ಡಿಕ್ಕಿ ಹೊಡೆದಿದೆ.
ಇದರಿಂದ ಬಸವರಾಜಪ್ಪ ಅವರ ಎಡಗಾಲಿಗೆ ಗಂಭೀರ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಿಯರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಆಂಬ್ಯುಲೆನ್ಸ್ ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ಗಾಯಗೊಂಡಿದ್ದ ಬಸವರಾಜಪ್ಪ ನಡು ರಸ್ತೆಯಲ್ಲಿ ನೋವಿನಿಂದ ನರಳಾಡಿದ್ದಾರೆ. ಕೊನೆಗೆ ಸ್ಥಳೀಯರು ಬಸ್ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಕೂಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.