ಚಾಮರಾಜನಗರ:- ಮುಖ್ಯಮಂತ್ರಿ ಸಿದ್ದರಾಮ ಯ್ಯ ಅವರು ಡಿಸೆಂಬರ್ 20ರ ಒಳಗೆ ಸರಸ್ವತಿ ಅವರನ್ನು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯನ್ನಾಗಿ ಮುಂದುವರೆಸಿ ಆದೇಶ ಮಾಡದಿದ್ದರೆ ‘ನಮ್ಮ ಕನ್ನಡಿಗರ ವಿಜಯ ಸೇನೆ’ವತಿಯಿಂದ ಮಲೆ ಮಹದೇಶ್ವರಬೆಟ್ಟದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ‘ನಮ್ಮ ಕನ್ನಡಿಗರ ವಿಜಯ ಸೇನೆ’ಯ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಚ್ಚರಿಸಿದ್ದಾರೆ.
ವಾ.ಓ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಸರಸ್ವತಿ ಅವರನ್ನು ವರ್ಗಾವಣೆ ಮಾಡಿಸಬೇಕೆಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪದೇ ಪದೇ ಸಿಎಂ ಅವರಿಗೆ ಪತ್ರ ಬರೆದು ಸಂಚು ನಡೆಸುತ್ತಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿ ಜೆ.ಮಹೇಶ್ ಅವರನ್ನು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ. ಜೆ.ಮಹೇಶ್ ಅವರು ಹನೂರಿನಲ್ಲಿ ದ್ವಿತೀಯ ಶ್ರೇಣಿ ತಹಸಿಲ್ದಾರ್ ಆಗಿದ್ದ ವೇಳೆ ಯಾವುದೇ ಪೂರಕ ದಾಖಲೆಗಳನ್ನು ಪಡೆಯದೆ ಅಕ್ರಮವಾಗಿ ಆರ್ಟಿಸಿಗಳನ್ನು ಮಾಡಿದ್ದರು. ಇಂತಹ ಭ್ರಷ್ಟ ಅಧಿಕಾರಿಯನ್ನು ಕಾರ್ಯದರ್ಶಿ ಹುದ್ದೆಗೆ ನಿಯೋಜಿಸುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹಠಕ್ಕೆ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡಲಿದೆ ಎಂದರು.
ಸರಸ್ವತಿ ಅವರು ಪ್ರಾಧಿಕಾರದ ಕಾರ್ಯದರ್ಶಿಯಾಗಿ ಬಂದ ನಂತರ ಮಹದೇಶ್ವರಬೆಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಅಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ತಡೆಯೊಡ್ಡಿ ದ್ದಾರೆ. ಇಂತಹ ಖಡಕ್ ಅಧಿಕಾರಿಯ ವರ್ಗಾವಣೆಗೆ ಸ್ಥಳೀಯ ಶಾಸಕರಲ್ಲದಿದ್ದರೂ ಪುಟ್ಟರಂಗಶೆಟ್ಟಿ ಅವರು ಪ್ರಯತ್ನಪಡುತ್ತಿದ್ದಾರೆ. ಇವರು ತಮ್ಮ ಕ್ಷೇತ್ರವಾದ ಚಾಮರಾಜನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ಹನೂರು ಕ್ಷೇತ್ರಕ್ಕೆ ಕೈ ಹಾಕಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.
ಸ್ಥಳೀಯ ಶಾಸಕ ಮಂಜುನಾಥ್ ಅವರು ಸಹ ಸರಸ್ವತಿ ಅವರನ್ನು ಪ್ರಾಧಿಕಾರದಲ್ಲೇ ಉಳಿಸಿ ಎಂದು ಸಿಎಂ ಅವರನ್ನು ಕೇಳುತ್ತಿಲ್ಲ. ಸರಸ್ವತಿ ಅವರು ಇದ್ದರೆ ನನಗೂ ತೊಂದರೆಯಾಗಲಿದೆ ಎನ್ನುವುದು ಮನದಟ್ಟಾಗಿದೆ ಎಂದೆನಿಸಿರಬಹುದು. ಶಾಸಕ ಪುಟ್ಟರಂಗಶೆಟ್ಟಿ ಅವರು ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿ ಜೆ.ಮಹೇಶ್ ಅವರೇ ಪ್ರಾಧಿಕಾರದ ಕಾರ್ಯದರ್ಶಿಯಾಗಬೇಕೆಂದು ಹಠ ಹಿಡಿದರೆ ಶಾಕಸ ಪುಟ್ಟರಂಗಶೆಟ್ಟಿ ಅವರ ಮನೆಯ ಮುಂದೆಯೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಸೇನೆ ಪದಾಧಿಕಾರಿಗಳಾದ ಮಹೇಂದ್, ಮಂಜೇಶ್, ಮಹದೇವಸ್ವಾಮಿ, ಶರತ್, ಸಂಜಯ್, ಶ್ರೀನಿವಾಸ್ ಇದ್ದರು.