ಮುಂಬೈ ಇಂಡಿಯನ್ಸ್ಗೆ ಮರಳಲು ಹಾರ್ದಿಕ್ ಪಾಂಡ್ಯ ಅಪಾರವಾದ ಹಂಬಲ ವ್ಯಕ್ತಪಡಿಸಿದ್ದರಿಂದ ಅವರ ನಿರ್ಧಾರ ಗೌರವಿಸಿದ್ದೇವೆ ಎಂದು ಗುಜರಾತ್ ಟೈಟಾನ್ಸ್ ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ಹೇಳಿದ್ದಾರೆ.
ಮುಂಬೈ ಜತೆಗಿನ ಈ ಭಾವನಾತ್ಮಕ ಸಂಬಂಧದ ಕಾರಣವಲ್ಲದೆ, ವರ್ಗಾವಣೆಯಿಂದಾಗಿ ಸಿಗುವ ಹೆಚ್ಚುವರಿ ಹಣದ ಆಸೆಯಿಂದಲೂ ಹಾರ್ದಿಕ್ ತವರು ರಾಜ್ಯದ ಗುಜರಾತ್ ತಂಡವನ್ನು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ, ಮುಂಬೈಗೆ ಮರಳಿರುವ ಹಾರ್ದಿಕ್ ನಡೆಯನ್ನು ಖ್ಯಾತ ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ಟೀಕಿಸಿದ್ದಾರೆ.
‘ಗುಜರಾತ್ ತಂಡದ ನಾಯಕರಾಗುವ ಸಲುವಾಗಿ ಹಾರ್ದಿಕ್ ಮುಂಬೈ ತಂಡ ತ್ಯಜಿಸಿದ್ದರು. ಇದೀಗ ರಾಷ್ಟ್ರೀಯ ತಂಡಕ್ಕೂ ನಾಯಕರಾಗಿದ್ದರೂ ಅವರು, ನಾಯಕರಾಗುವ ಖಚಿತತೆ ಇಲ್ಲದೆ ಮುಂಬೈ ತಂಡಕ್ಕೆ ಮರಳಿದ್ದಾರೆ. ಟಿ20 ವಿಶ್ವಕಪ್ಗೆ ಭಾರತ ತಂಡದ ನಾಯಕರಾಗುವವರು, ಫ್ರಾಂಚೈಸಿ ತಂಡಕ್ಕೆ ನಾಯಕರಲ್ಲ. ಇದರ ಔಚಿತ್ಯ ಅರ್ಥವಾಗುತ್ತಿಲ್ಲ’ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.