ಮಂಡ್ಯ:– ಬಿಜೆಪಿ ನಾಯಕರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಮರೆತೇ ಬಿಟ್ಟರಾ? ಹೀಗೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಬಿಜೆಪಿ ನಾಯಕರು ಇತ್ತೀಚೆಗಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಜತೆಗೆ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ. ಇದೆಲ್ಲವನ್ನು ಗಮನಿಸಿದರೆ ಚುನಾವಣೆ ಮುನ್ನವೇ ಬೇಡವಾದರಾ? ಎಂಬ ಸಂಶಯ ಕಾಡಲಾರಂಭಿಸಿದೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡ ಸುಮಲತಾ ಅವರಿಗೆ ಯಾವುದೇ ರಾಜಕೀಯ ಪಕ್ಷ ಅನಿವಾರ್ಯವಲ್ಲ. ಆದರೆ ಕಳೆದ ಚುನಾವಣೆಗೂ ಈ ಬಾರಿ ನಡೆಯಲಿರುವ ಚುನಾವಣೆಗೆ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ಮತ್ತು ಸದ್ಯ ಅವರನ್ನು ಮತದಾರರು ಕೂಡ ರಾಜಕಾರಣಿಯನ್ನಾಗಿಯೇ ನೋಡುವುದರಿಂದ, ಹಿಂದಿನ ಅನುಕಂಪ ಈ ಬಾರಿ ದೊರೆಯುವುದು ದೂರದ ಮಾತಾಗಿದೆ. ಜೆಡಿಎಸ್ ನೊಂದಿಗಿನ ಮೈತ್ರಿ ಬಳಿಕದ ಬೆಳವಣಿಗೆಗಳು ಸುಮಲತಾ ಅವರಿಗೆ ಪೂರಕನಾ? ಮಾರಕನಾ? ಎಂಬುದು ಈಗ ಎಲ್ಲರ ಮುಂದಿರುವ ಕುತೂಹಲವಾಗಿದೆ.
ಈ ಹಿಂದೆಯೇ ನಾನು ರಾಜಕೀಯ ಬಿಡುತ್ತೇನೆ ಆದರೆ ಸ್ವಾಭಿಮಾನ ಬಿಡಲ್ಲ. ನಾನು ಮಂಡ್ಯದವಳು ಮಂಡ್ಯದಲ್ಲಿಯೇ ಇರುತ್ತೇನೆ. ಇಲ್ಲಿಯೇ ರಾಜಕಾರಣ ಮಾಡುತ್ತೇನೆ ಎಂಬ ಮಾತನ್ನು ಸುಮಲತಾ ಹೇಳಿಕೊಂಡೇ ಬಂದಿದ್ದಾರೆ. ಮತ್ತು ಅದಕ್ಕೆ ಬದ್ಧವಾಗಿಯೇ ಉಳಿಯುವ ತೀರ್ಮಾನವನ್ನು ಮಾಡಿದ್ದಾರೆ. ಹೀಗಾಗಿ ಬಿಜೆಪಿ – ಜೆಡಿಎಸ್ ಮೈತ್ರಿಯ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಇಲ್ಲ. ನನ್ನ ಅಭಿಪ್ರಾಯವನ್ನು ಯಾರೂ ಕೇಳಿಲ್ಲ. ಸ್ಪರ್ಧೆ ಕುರಿತಂತೆ ಇನ್ನೂ ಈಗ್ಲೇ ಏನೂ ಹೇಳುವುದಿಲ್ಲ ಎನ್ನುವ ಮೂಲಕ ತಮ್ಮ ನಿಲುವು ಏನು ಎಂಬುದನ್ನು ಪರೋಕ್ಷವಾಗಿಯೇ ಎದುರಾಳಿಗಳಿಗೆ ರವಾನಿಸಿದ್ದಾರೆ.