ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ನೇತೃತ್ವದ ಮಲೇಷ್ಯಾ (Malaysia) ಸರ್ಕಾರವು ಚೀನಾ (China) ಮತ್ತು ಭಾರತೀಯ (Indians) ನಾಗರಿಕರಿಗೆ ಪ್ರವೇಶ ವೀಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದೆ. ಮಲೇಷ್ಯಾ ಸರ್ಕಾರ ಡಿಸೆಂಬರ್ 1ರಿಂದ 30 ದಿನಗಳವರೆಗೆ ವಾಸ್ತವ್ಯ ಹೂಡಲು ಚೀನಾ ಮತ್ತು ಭಾರತದ ನಾಗರಿಕರಿಗೆ ವೀಸಾಮುಕ್ತ ಪ್ರವೇಶವನ್ನು (Visa-Free Entry) ಘೋಷಿಸಿದೆ.
ಪುತ್ರಜಯದಲ್ಲಿ ನಡೆದ ಪೀಪಲ್ಸ್ ಜಸ್ಟಿಸ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭ ಇಬ್ರಾಹಿಂ ಈ ಘೋಷಣೆ ಮಾಡಿದರು.
ಭಾರತೀಯ ಪ್ರಯಾಣಿಕರಿಗೆ ಏನು ಬದಲಾವಣೆ?
ವೀಸಾ ನಿರ್ಮೂಲನೆ: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಇನ್ನು ಮುಂದೆ ಡಿಸೆಂಬರ್ 1 ರಿಂದ ಪ್ರವೇಶ ವೀಸಾಗಳ ಅಗತ್ಯವಿಲ್ಲ.
ವೀಸಾ–ಮುಕ್ತ ವಾಸ್ತವ್ಯ: ಭಾರತೀಯರು ವೀಸಾ ಪಡೆಯದೆ 30 ದಿನಗಳವರೆಗೆ ಮಲೇಷ್ಯಾದಲ್ಲಿ ಉಳಿಯಬಹುದು.
ಭದ್ರತಾ ಸ್ಕ್ರೀನಿಂಗ್: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಭದ್ರತಾ ಸ್ಕ್ರೀನಿಂಗ್ ಇರುತ್ತದೆ.
ಈ ಕ್ರಮ ಕೈಗೊಳ್ಳಲು ಕಾರಣವೇನು?
ವಿಶೇಷವಾಗಿ ಭಾರತ ಮತ್ತು ಚೀನಾದಿಂದ ಪ್ರವಾಸಿಗರು ಮತ್ತು ಹೂಡಿಕೆದಾರರ ಒಳಹರಿವನ್ನು ಮತ್ತಷ್ಟು ಉತ್ತೇಜಿಸಲು ಮುಂಬರುವ ವರ್ಷದಲ್ಲಿ ವೀಸಾ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ಪ್ರಧಾನಿ ಇಬ್ರಾಹಿಂ ಈ ಹಿಂದೆ ಬಹಿರಂಗಪಡಿಸಿದ್ದರು.
ಚೀನಾ ಮತ್ತು ಭಾರತವು ಮಲೇಷ್ಯಾಕ್ಕೆ ನಿರ್ಣಾಯಕ ಮಾರುಕಟ್ಟೆಗಳಾಗಿದ್ದು, ಪ್ರವಾಸಿಗರ ಆಗಮನದ ನಾಲ್ಕನೇ ಮತ್ತು ಐದನೇ ಅತಿದೊಡ್ಡ ಮೂಲಗಳಾಗಿವೆ. ಈ ವರ್ಷದ ಜನವರಿ ಮತ್ತು ಜೂನ್ ನಡುವೆ, ಮಲೇಷ್ಯಾವು ಒಟ್ಟು 9.16 ಮಿಲಿಯನ್ ಪ್ರವಾಸಿಗರ ಆಗಮನವನ್ನು ದಾಖಲಿಸಿದೆ. ಭಾರತದಿಂದ ಮಲೇಷ್ಯಾಗೆ ಒಟ್ಟು 2,83,885 ಪ್ರವಾಸಿಗರು ಆಗಮಿಸಿದ್ದು, ಚೀನಾದಿಂದ ಒಟ್ಟು 4,98,540 ಪ್ರವಾಸಿಗರು ಭೇಟಿ ನೀಡಿದ್ದಾರೆ.