ಬೆಂಗಳೂರು: ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಮುಂಬೈ ಇಂಡಿಯನ್ಸ್ ಬಳಗ ಸೇರಿದ್ದಾರೆ. 2 ವರ್ಷಗಳ ಕಾಲ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿ ಆಡಿ ಒಂದು ಟ್ರೋಫಿ ಗೆದ್ದು ಹಾಗೂ ಒಮ್ಮೆ ರನ್ನರ್ಸ್ಅಪ್ ಸ್ಥಾನ ತಂದುಕೊಟ್ಟ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2024 ಟೂರ್ನಿಗೆ ಪ್ರಕಟ ಮಾಡಿದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಟ್ರೇಡಿಂಗ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್ ಸೇರಿದ್ದಾರೆ. ಹಾರ್ದಿಕ್ ಸಲುವಾಗಿ ಟೈಟನ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ 15 ಕೋಟಿ ರೂ. ನೀಡಲಿದೆ ಎಂದು ಕ್ರಿಕ್ಬಝ್ ವರದಿ ಮಾಡಿದೆ.
ಗುಜರಾತ್ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಬಂದಿರುವ ಕಾರಣ ಯುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ತಂಡದ ಕ್ಯಾಪ್ಟನ್ ಆಗುವ ರೇಸ್ನಲ್ಲಿ ಮುಂಚೂಣಿಗೆ ಬಂದಿದ್ದಾರೆ. ಮುಂಬೈ ಇಂಡಿಯನ್ಸ್ ತಾನು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಿದ ಬಳಿಕ ತನ್ನ ಖಾತೆಯಲ್ಲಿ 15.25 ಕೋಟಿ ರೂ. ಮಾತ್ರವೇ ಹೊಂದಿತ್ತು. ಈಗ ಹಾರ್ದಿಕ್ ಪಾಂಡ್ಯ ಖರೀದಿ ಸಲುವಾಗಿ ತನ್ನ ಸ್ಟಾರ್ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾರಾಟ ಮಾಡಿ ಪರ್ಸ್ ಮೊತ್ತ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಎನ್ನಲಾಗಿದೆ.
ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಈ ಸಲುವಾಗಿ ಉಳಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಲು ನವೆಂಬರ್ 26 ಅಂತಿಮ ದಿನವಾಗಿತ್ತು. ಆದರೂ, ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಇರುವ ಟ್ರೇಡಿಂಗ್ ವಿಂಡೋ ಡಿಸೆಂಬರ್ 12ರವರೆಗೆ ತೆರೆದಿರಲಿದೆ. ಹೀಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲಾ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸುವ ಡೀಲ್ ಮುಗಿಸಲಾಗಿದೆ.