ಬೆಂಗಳೂರು:- ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಮ್ಮ-ಕಂಬಳ’ಕ್ಕೆ ಭಾನುವಾರ ತೆರೆ ಬಿದ್ದಿದೆ.
“ಕಾಂತಾರ’ ಚಿತ್ರದಲ್ಲಿ ಓಡಿದ್ದ ಕೋಣ ಚಿನ್ನದ ಪದಕ ಪಡೆದುಕೊಂಡಿತು. ಬೊಳಂಬಳ್ಳಿ ಪರಮೇಶ್ವರ್ ಭಟ್ಟ ಅವರ ಅಪ್ಪು ಕುಟ್ಟಿ 6.5 ಕೋಲು ನೀರು ಚಿಮ್ಮಿಸಿ ಕೆನೆಹಲಗೆ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದೆ.
ಇನ್ಮುಂದೆ ಮುಂಬಯಿಯಲ್ಲೂ ಆಯೋಜಿಸುವ ಚಿಂತನೆ ವ್ಯಕ್ತವಾಗಿದೆ. ಜತೆಗೆ ಪ್ರೀಮಿಯರ್ ಲೀಗ್ನಂತೆ ಕಂಬಳದ ಲೀಗ್ ನಡೆಸುವ ಮುನ್ಸೂಚನೆ ಮೇಲ್ಮೋಟಕ್ಕೆ ಕಂಡ ಬರುತ್ತಿದೆ. ಕಂಬಳ ಆಯೋಜನೆ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟವರು ಪಡೆದುಕೊಂಡಿದ್ದಾರೆ.
ಕಂಬಳವನ್ನು ರಜಾದಿನಗಳಲ್ಲಿ ಹಮ್ಮಿಕೊಂಡ ಕಾರಣ 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಸಂಭ್ರಮಿಸಿದರು. ಕೊನೆಯ ದಿನದ ಕಂಬಳದಲ್ಲಿ ಎಲ್ಲಿ ನೋಡಿದರೂ ಜನರ ದಂಡು, ನೂಕು ನುಗ್ಗಲು, ಜಾತ್ರೆಯ ವಾತಾವರಣ ವಿಶೇಷವಾಗಿತ್ತು.
ಕಂಬಳದಲ್ಲಿ ಕೋಣಗಳು ಓಡುವುದು ಎಷ್ಟು ಮುಖ್ಯವೋ ವೀಕ್ಷಕ ವಿವರಣೆ ಕೂಡ ಅಷ್ಟೇ ಮುಖ್ಯ. ಈ ಬಾರಿ ಬೆಂಗಳೂರು ಕಂಬಳಕ್ಕೆ ಕರಾವಳಿಯಿಂದ 30 ಮಂದಿ ವೀಕ್ಷಕ ವಿವರಣೆಗಾರರ ತಂಡ ಕೆಲಸ ಮಾಡಿತ್ತು. ಇವರು ಪ್ರತಿ ನಾಲ್ಕು ಗಂಟೆಯ ಪಾಳಿಯಲ್ಲಿ ದುಡಿದಿದ್ದರು.
ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಎರಡು ದಿನಗಳಿಂದ ಯಕ್ಷಗಾನ, ಆಟಿ ಕಳಂಜ, ಹುಲಿ ವೇಷ, ಕಂಗೀಲು ನೃತ್ಯ, ಮಂಕಾಳಿ ನಲಿಕೆ, ಬಾಲಿವುಡ್ ಸಮಕಾಲೀನ ನೃತ್ಯ, ಕಂಬಳದ ಪದ ನಲಿಕೆ, ಚೆನ್ನು ನಲಿಕೆ ಮುಂತಾದವು ಮನರಂಜನೆ ನೀಡಿತು. ಆಕ್ಸಿಜನ್ ಡ್ಯಾನ್ಸ್ ತಂಡ ನಡೆಸಿಕೊಟ್ಟ ನೃತ್ಯಕ್ಕೆ ಪ್ರೇಕ್ಷಕರು ಮಾರು ಹೋದರು. ಪ್ರಶಂಸಾ ಮಂಗಳೂರು ಹಾಗೂ ಕಾಮಿಡಿ ಕಿಲಾಡಿ ತಂಡದವರಿಂದ ಕಾಮಿಡಿ ಶೋ ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿಯರಾದ ಇಂದು ನಾಗರಾಜ್, ಶಮಿತಾ ಮಲಾ°ಡ್ ಹಾಗೂ ಗುರುಕಿರಣ್ ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಮಂದಿ ಮುಗಿಬಿದ್ದರು.