ದೇವದುರ್ಗ (ರಾಯಚೂರು ಜಿಲ್ಲೆ): ತಾಲ್ಲೂಕಿನ 33 ಗ್ರಾಮ ಪಂಚಾಯಿತಿ ಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ನಡೆದ ಅಕ್ರಮ ಕುರಿತು ರಾಜ್ಯ ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿ ನೀಡಿದ ವರದಿ ಆಧರಿಸಿ ಇಬ್ಬರು ಅಧಿಕಾರಿಗಳ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶನದ ಮೇರೆಗೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಅಣ್ಣಾರಾವ್ ನೀಡಿದ ದೂರಿನಂತೆ ತಾಲ್ಲೂಕು ಪಂಚಾ ಯಿತಿಯ ಹಿಂದಿನ ಇಒ ಪಂಪಾಪತಿ ಹಿರೇಮಠ, ನಿರ್ಗಮಿತ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಬಸಣ್ಣ ನಾಯಕ ಹೇಮನೂರು ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 465, 409, 420, 34ರ ಅಡಿ ಪ್ರಕರಣ ದಾಖಲಾಗಿದೆ.
ನರೇಗಾ ಯೋಜನೆಯಡಿ 2020–21, 2021–22 ಹಾಗೂ 2022–23ರವರೆಗೆ ನಡೆದ ಕಾಮಗಾರಿ ಅನುಷ್ಠಾನಗೊಂಡ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ ₹11.64 ಕೋಟಿ ಮತ್ತು ಅನುಷ್ಠಾನಗೊಂಡ ಕಾಮಗಾರಿಗಳ ಕಡತಗಳನ್ನು ನಿರ್ವಹಿಸದೆ ₹32.51 ಕೋಟಿಯನ್ನು ಅಕ್ರಮವಾಗಿ ಪಾವತಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ₹102.32 ಕೋಟಿಯನ್ನು ಶ್ರೀ ಮಾರುತೇಶ್ವರ ಎಂಟರ್ಪ್ರೈಸಸ್ಗೆ ನಿಯಮ ಮೀರಿ ಪಾವತಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
₹5.10 ಕೋಟಿ ರಾಜಧನವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಪಾವತಿಸದೇ ಸರ್ಕಾರಕ್ಕೆ ನಷ್ಟ ಮಾಡಲಾಗಿದೆ. ವೈಯಕ್ತಿಕವಾಗಿ ಕಟ್ಟಿಕೊಂಡ ದನದ ಶೆಡ್ಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಪಾವತಿಸದೆ ನಿಯಮ ಬಾಹಿರವಾಗಿ ಸಾಮಗ್ರಿ ಪೂರೈಕೆದಾರರಿಗೆ ಹಣ ಪಾವತಿಸಲಾಗಿದೆ. ಕಾಮಗಾರಿ ನಡೆದ ಸ್ಥಳಗಳಲ್ಲಿ ನಾಮಫಲಕ ಅಳವಡಿಸದೆ ಮತ್ತು ಹೆಚ್ಚುವರಿಯಾಗಿ ನಕಲಿ ಜಾಬ್ ಕಾರ್ಡ್ಗಳನ್ನು ಸೃಷ್ಟಿಸಿ ₹49.27 ಕೋಟಿಯನ್ನು ಸರ್ಕಾರಕ್ಕೆ ನಷ್ಟ ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ನಮೂದಿಸಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕು ಪಂಚಾಯಿತಿ ಇಒ ಆಗಿದ್ದ ಮೊದಲನೇ ಆರೋಪಿ ಪಂಪಾಪತಿ ಹಿರೇಮಠ, ಎರಡನೇ ಆರೋಪಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕು ಇಒ ಬಸಣ್ಣ ನಾಯಕ ಹೇಮನೂರು ಅವರು ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.
ಅಂತಿಮ ವರದಿ ಬಂದ ಬಳಿಕ ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ತಾಂತ್ರಿಕ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಅಕ್ರಮದಲ್ಲಿ ಭಾಗಿಯಾದವರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ. ಅವ್ಯವಹಾರದ ಸಂಬಂಧ ಈವರೆಗೆ 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.