ಕೋಲಾರ:- ಸೋಮಣ್ಣ ಎಲ್ಲ ಪಾರ್ಟಿ ನೋಡಿಕೊಂಡು ಬಂದಿದ್ದಾರೆ, ಬಿಜೆಪಿಯಲ್ಲೇ ಇರುತ್ತಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಎಲ್ಲಾ ರಾಜಕೀಯ ಪಕ್ಷದವರ ಮೇಲೆ ಸಿಬಿಐ ಕೇಸ್ ಗಳಿವೆ. ಹಾಗಂತ ಇಂತಹ ನಿರ್ಧಾರಗಳು ಹಿಂದೆ ನಡೆದಿಲ್ಲ ಎಂದು ಡಿಕೆಶಿ ಮೇಲಿನ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಡಿ ಶಿಫಾರಸ್ಸು ಮಾಡಿದಕ್ಕೆ ನಾವು ಸಿಬಿಐಗೆ ವಹಿಸಿದ್ವಿ. ರಾಜಕೀಯ ದ್ವೇಷ ಎಂಬುದೆಲ್ಲ ಸುಳ್ಳು. ಕಾನೂನು ಸಲಹೆ ಪಡೆದು ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಇನ್ನೇನು ಚಾರ್ಜ್ ಶೀಟ್ ಆಗುವ ಕ್ಷಣದಲ್ಲಿ ಈ ರೀತಿ ಮೂರ್ಖತನದ ಕೆಲಸ ಮಾಡಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದರು.
ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಈ ತರಹದ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್ನ ಈ ನಿರ್ಧಾರದಿಂದ ಕಾನೂನು ಮತ್ತು ರಾಜಕಾರಣಕ್ಕೆ ಸಂಘರ್ಷ ಆಗುವಂತೆ ಮಾಡಿದೆ. ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಡಿಕೆಶಿ ಗೆ ಇರಬೇಕಾಗಿತ್ತು. ಆದರೆ ಅವರು ತಪ್ಪು ಮಾಡಿದ್ದರಿಂದಲೇ ಇಂಥ ನಿರ್ಧಾರ ಮಾಡಿದ್ದಾರೆ. ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ ಘೋರ ಅಪಚಾರವೆಸಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಮೈತ್ರಿ ಸರ್ಕಾರ ಪತನ ಎಂದು ಆರ್.ಅಶೋಕ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಜನರು ಬಹುಮತ ನೀಡಿದ್ದಾರೆ. ಆದರೆ ನೆನಪಿಡಿ ಮುಂದಿನ ದಿನಗಳಲ್ಲಿ ಶಾಸಕರನ್ನು ಜನರೇ ಬೆನ್ನಟ್ಟಿ ಕಲ್ಲಲ್ಲಿ ಓಡಿತ್ತಾರೆ. 5 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಬೇಕು. ಆಗ ಮಾತ್ರ ಸರ್ಕಾರದ ಬಂಡವಾಳ ಜನರಿಗೆ ತಿಳಿಯಲಿದೆ. ಶೇ.25 ರಷ್ಟು ಜನರಿಗೆ ಆಶ್ವಾಸನೆಗಳು ತಲುಪಿಲ್ಲ. ಅನುದಾನ ಇಲ್ಲದೆ ಶಾಸಕರು ಕ್ಷೇತ್ರದಲ್ಲಿ ಓಡಾಡಲು ಆಗ್ತಿಲ್ಲ ಎಂದರು.
ರಾಜ್ಯ ಬಿಜೆಪಿಯ ಭಿನಮತ ಕುರಿತು ಪ್ರತಿಕ್ರಿಯಿಸಿದ ಅವರು ಯತ್ನಾಳ್, ಸೋಮಣ್ಣ ಇಬ್ಬರೂ ನಮ್ಮ ಪಕ್ಷದ ಹಿರಿಯ ನಾಯಕರು. ಬಿಜೆಪಿಯಲ್ಲಿ ಕಿರಿಯರಾದ ವಿಜಯೇಂದ್ರ ಅವರಿಗೆ ಅಧಿಕಾರ ನೀಡಿದಕ್ಕೆ ಅಸಮಾಧಾನ ಗೊಂಡಿದ್ದಾರೆ. BSY, ಯತ್ನಾಳ್, ಸೋಮಣ್ಣ ಮಾರ್ಗದರ್ಶನದಲ್ಲೇ ವಿಜಯೇಂದ್ರ ಮುಂದುವರಿಯುತ್ತಾರೆ. ಸೋಮಣ್ಣ ಎಲ್ಲಾ ಪಾರ್ಟಿಯನ್ನು ನೋಡಿಕೊಂಡು ಬಂದಿದ್ದಾರೆ. ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಕೆಲಸ ಆಗಲಿದೆ ಎಂದರು.
ಇನ್ನು ಕಾಂಗ್ರೆಸ್ ನಲ್ಲಿ ಒಳಗೆ ಜಗಳ ಕುರಿತು ಡಿಕೆ ಶಿವಕುಮಾರ್ಗೆ ಖೆಡ್ಡಾ ತೋಡಿದ್ದಾರೆ ಎಂಬ ವಿಚಾರ ಸಂಬಂಧ ಮಾತನಾಡಿದ ಅವರು, ಗಂಡ ಹೆಂಡತಿ ರೀತಿ ಕಾಂಗ್ರೆಸ್ ನಲ್ಲಿ ಹಗಲು ಜಗಳವಾಡ್ತಾರೆ, ರಾತ್ರಿ ಒಂದಾಗುತ್ತಾರೆ. ಸರ್ಕಾರ ಎಷ್ಟು ದಿನಗಳ ಕಾಲ ಇರುತ್ತೆ ಅನ್ನೋದನ್ನ ನೋಡಬೇಕು ಎಂದರು.