ಬೆಂಗಳೂರು: ಪಿಂಚಣಿ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. ಮೃತ ಸರ್ಕಾರಿ ನೌಕರನ ಮೊದಲನೇ ಪತ್ನಿ ಬದುಕಿದ್ದಾಗಲೇ ಎರಡನೇ ಪತ್ನಿಗೆ ಪಿಂಚಣಿ ಪಡೆಯುವ ಅಧಿಕಾರವಿಲ್ಲ ಎಂದು ಪಿ.ಬಿ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ 2ನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯನ್ಯಾಯಮೂರ್ತಿಗಳು ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಅಧಿಕಾರವಿದೆ. ಮೊದಲನೇ ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹಾಗಾಗಿ ಎರಡನೇ ಪತ್ನಿಗೆ ಪಿಂಚಣಿಯ ಹಕ್ಕಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, “ಕೌಟುಂಬಿಕ ಪಿಂಚಣಿಯನ್ನು ನಿಯಮದ ಪ್ರಕಾರ ‘ಪತ್ನಿ’ಗೆ ನೀಡಲಾಗುವುದು. ಆದರೆ ಎರಡನೇ ಪತ್ನಿಯ ಮದುವೆ ಕಾನೂನಿನ ಕಣ್ಣಲ್ಲಿ ಮದುವೆಯೇ ಅಲ್ಲ. ಹಾಗಾಗಿ ಹಿಂದೂ ವಿವಾಹ ಕಾಯಿದೆ 1955ರ ಪ್ರಕಾರ ದ್ವಿಪತ್ನಿತ್ವ ಅಪರಾಧವಾಗುತ್ತದೆ’ ಎಂದು ಆದೇಶಿಸಿದೆ. ಅರ್ಜಿದಾರರು ಕಾನೂನು ಬದ್ಧವಾಗಿ ಮದುವೆಯಾದ ಪತ್ನಿಯಲ್ಲ ಹಾಗಾಗಿ ಪಿಂಚಣಿ ನೀಡಲಾಗದು ಎಂದು ಆದೇಶ ನೀಡಿದೆ.