ಹುಬ್ಬಳ್ಳಿ: ಕೊಲೆ ಯತ್ನ, ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡ ರೌಡಿಯೊಬ್ಬ ಹಿಡಿಯಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಪ್ರತಿಯಾಗಿ ಆತನ ಕಾಲಿಗೆ ಗುಂಡು ಹಾರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೊಲೆಗೆ ಯತ್ನ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸತೀಶ ಗೋನಾ ಎಂಬಾತನ ಕಾಲಿಗೆ ಗುಂಡೇಟು ಬಿದ್ದಿದೆ.
ಹೆಂಡತಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ ಗೋನಾ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ಶನಿವಾರ ಗದಗ ರಸ್ತೆಯಲ್ಲಿ ಈತ ಇದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಹಿಡಿಯಲು ಹೋದಾಗ, ಅವರ ಮೇಲೆ ಕಲ್ಲು ತೂರಿದ್ದಲ್ಲದೆ, ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಶಹರ ಠಾಣೆ ಇನ್ಸ್ಪೆಕ್ಟರ್ ರಫಿಕ್ ತಹಶೀಲ್ದಾರ್ ಹಲ್ಲೆಗೆ ಮುಂದಾದ ರೌಡಿಯನ್ನು ತಡೆಯಲು ಆತನ ಕಾಲಿಗೆ ಫೈರ್ ಮಾಡಿ ಬಂಧಿಸಿದ್ದಾರೆ. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೌಡಿಶೀಟರ್ ನ ದಾಳಿಯಿಂದಾಗಿ ಶಹರ ಠಾಣೆ ಪಿಎಸ್ ಐ ವಿನೋದ ಮತ್ತು ಪೇದೆ ಜಗದೀಶ ಎಂಬುವರಿಗೆ ಗಾಯವಾಗಿದ್ದು, ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳ ಹಾಗೂ ಕಿಮ್ಸ್ ಆಸ್ಪತ್ರೆಗೆ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.