ಬೆಂಗಳೂರು:-ಡಿಕೆಶಿ ವಿರುದ್ಧ ಸಿಬಿಐ ತನಿಖೆ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ತಿರುಚುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಇ.ಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಸಿಬಿಐಗೆ ವಹಿಸುವಂತೆ ಸೂಚನೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.
ಅಂದು ರಾಜ್ಯ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದೇ ಸಿಬಿಐ ತನಿಖೆಗೆ ಆದೇಶ ಮಾಡಲಾಗಿತ್ತು. ಇ.ಡಿಯವರು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಸಿಬಿಐಗೆ ಕೊಡುವಂತೆ ಸೂಚನೆ ಕೊಟ್ಟಿದ್ದರಿಂದ ಆದೇಶ ಮಾಡಿದೆವು. ಇದರಲ್ಲಿ ಯಾವುದೇ ನಿಯಮಗಳು ಉಲ್ಲಂಘನೆ ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದೆಲ್ಲವೂ ಗೊತ್ತಿದ್ದರೂ ಜನರನ್ನು ದಿಕ್ಕು ತಪ್ಪಿಸಲು ಸುಳ್ಳು ಹೇಳುತ್ತಿದ್ದಾರೆ. ಎಜಿಯವರ ಅಭಿಪ್ರಾಯದ ಮೇರೆಗೆ ಸಿಬಿಐಗೆ ವಹಿಸಿದ್ದೆವು. ಒಂದಲ್ಲ, ಎರಡಲ್ಲ, ಸಾವಿರ ಬಾರಿ ಹೇಳುತ್ತೇನೆ. ನಾನು ಹೇಳಿರುವುದಕ್ಕೆ ಬದ್ಧನಾಗಿದ್ದೇನೆ. ಇನ್ನು ಮುಂದಾದರೂ ಸರ್ಕಾರ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.