ಬೆಂಗಳೂರು:- ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು, ಕೆಆರ್ಪಿಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷಗಳು ಆರಂಭವಾಗುವುದೇ ಒಂದು, ಎರಡು ಸ್ಥಾನಗಳಿಂದ. ಬಿಜೆಪಿ ಕೂಡಾ ಎರಡು ಸ್ಥಾನ ಗಳಿಸುವ ಮೂಲಕ ಆರಂಭವಾಗಿದ್ದು, ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಒಂದು ಸೀಟ್ ನಿಂದ ಆರಂಭವಾಗಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಒಂದು ಸ್ಥಾನದಿಂದಲೇ ಪಕ್ಷ ಪ್ರಾರಂಭವಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಹಾಗೂ ಮನೆ ಮನೆಗಳನ್ನು ನಾವು ತಲುಪುತ್ತೇವೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬರುವ ಡಿಸೆಂಬರ್ಗೆ ಒಂದು ವರ್ಷ ಆಗಲಿದೆ. ರಾಮಣ್ಣ ಹೆಸರಿನಲ್ಲಿ ಪಕ್ಷ ಪ್ರಾರಂಭಿಸಿದ್ದೆ. ಇಂದು ನನ್ನ ಹೆಸರಿಗೆ ಅದು ವರ್ಗಾವಣೆ ಆಗಿದೆ. ತ್ರಯೋದಶಿಯಂದೇ ನನಗೆ ವರ್ಗಾವಣೆಯಾಗಿದೆ ಎಂದರು.
ಪಕ್ಷ ಸ್ಥಾಪನೆ ಮಾಡಿದ ನಂತರ ನನಗೆ ಕೇವಲ ನಾಲ್ಕು ತಿಂಗಳ ಅವಕಾಶ ಇತ್ತು. ಬಳ್ಳಾರಿಗೆ ನಾನು ಹೋಗದೆ ಇರುವಂತಹ ಸ್ಥಿತಿಯಲ್ಲೂ ಕೂಡ ರಾಷ್ಟ್ರೀಯ ಪಕ್ಷಗಳಿಗೆ ಒಳ್ಳೆಯ ಫೈಟ್ ಕೊಟ್ಟಿದ್ದೇವೆ. 2028ರ ವಿಧಾನಸಭಾ ಚುನಾವಣೆಗೆ ಇಡೀ ರಾಜ್ಯಕ್ಕೆ ನಾನು ತಲುಪುವ ಆತ್ಮ ವಿಶ್ವಾಸ ಇದೆ. ವಿಶ್ವಾಸದಿಂದಲೇ ನಾನು ಗಂಗಾವತಿ ಕ್ಷೇತ್ರಕ್ಕೆ ಹೋಗಿದ್ದೆ. ಬೇರೆಯವರ ರೀತಿ ನಾನು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿಲ್ಲ ಎಂದು ಹೇಳಿದರು.
ಬಿಜೆಪಿಯಾಗಲಿ ಅಥವಾ ಯಾವುದೇ ಪಕ್ಷದ ಜೊತೆ ನಾವು ಹೋಗುವುದಿಲ್ಲ. ಸ್ವತಂತ್ರವಾಗಿ ನಾವು ಸ್ಪರ್ಧೆ ಮಾಡುತ್ತೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ನಾವು ಸ್ಪರ್ಧೆ ಮಾಡಲ್ಲ. ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಾನು ಕೆಲಸ ಮಾಡುತ್ತೇನೆ. ಫೆಬ್ರವರಿಯಲ್ಲಿ ನಾವು ಎಷ್ಟು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇವೆಂದು ಹೇಳುತ್ತೇವೆ. ಬಳ್ಳಾರಿ ನಾನು ಹುಟ್ಟಿ ಬೆಳೆದ ಜಿಲ್ಲೆ. ಕೋಲಾರದಲ್ಲೂ ನನ್ನ ಮೇಲೆ ಜನರಿಗೆ ಪ್ರೀತಿ ಇದೆ ಎಂದರು.