ಕೋಲಾರ: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದ ಶಾಶ್ವತ ನೀರಾವರಿ ವೇದಿಕೆಯಲ್ಲಿ ಪದವಿ ಕಾಲೇಜುಗಳ ತರಗತಿಗಳನ್ನು ಬಹಿಷ್ಕಾರಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟವಧಿ ಧರಣಿ 2 ನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು ನಿಮ್ಕ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಮುಖೇನ ಗಮನ ಸೆಳೆಯುವುದಲ್ಲದೆ ಖುದ್ದಾಗಿ ಭೇಟಿ ಮಾಡಿ ನಿಮ್ಮಗಳ ಬೇಡಿಕೆಗಳ ಈಡೇರಿಕೆಗಾಗಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.
ತಮ್ಮನ್ನು ಪ್ರತಿನಿಧಿಸುವ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಲು ಒತ್ತಡ ಹಾಕುವಂತೆ ಹಾಗೂ ಸ್ಥಳೀಯ ಶಾಸಕರುಗಳ ಗಮನ ಸೆಳೆದು ಅವರುಗಳೂ ನಿಮ್ಮ ಪರ ಮಾತಾಡಲು ಒತ್ತಡ ಹಾಕುವಂತೆ ಮಾಡುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ನಾಗನಾಳ ಮುನಿಯಪ್ಪ ಮಾತನಾಡಿ ಸರಕಾರ ನಮ್ಮನ್ನು ದುಡಿಸಿಕೊಳ್ಳಲು ಅಷ್ಟೇ ಇದ್ದಾರೆ ಹೊರತು ನಮ್ಮ ಕಷ್ಟಗಳಿಗೆ ಸ್ವಂದನೆ ಇಲ್ಲ ನಮ್ಮ ಸೇವಾ ಅವಧಿಯನ್ನು ಪರಿಗಣಿಸಿ ಮಾನವೀಯತೆಯ ಕುಟುಂಬದ ಭದ್ರತೆ ದೃಷ್ಟಿಯಿಂದ ತಕ್ಷಣ ಸರ್ಕಾರ ಕೂಡಲೇ ಅಥಿತಿ ಉಪನ್ಯಾಸಕರನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ
ಮಾಜಿ ಸಭಾಪತಿಗಳು ಸರ್ಕಾರದ ಮೇಲೆ ಒತ್ತಡ ಹಾಕ ಬೇಕೆಂದು ಮನವಿ ಮಾಡಿದರು.
ಧರಣಿಯಲ್ಲಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಗೌರವ ಅಧ್ಯಕ್ಷ ಚಂಜಿಮಲೆ ಶ್ರೀನಿವಾಸ್, ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸಿಎಂ ನಾಗಮಣಿ, ಜಿಲ್ಲಾಧ್ಯಕ್ಷ ಎ.ಬಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಸಹ ಕಾರ್ಯದರ್ಶಿ ಕೆ.ಎನ್.ನಾಗರಾಜ್, ಜಿಲ್ಲಾ ಮುಖಂಡರಾದ ಬಾಲಾಜಿ, ನೂರ್ ಅಹ್ಮದ್, ಲಕ್ಷ್ಮೀ, ಶಿವಣ್ಣ, ಸಿದ್ದರಾಜು, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.