ಬೆಂಗಳೂರು:- ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರಕ್ಕೆ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಕೆ ಶಿವಕುಮಾರ ವಿರುದ್ಧದ ಸಿಬಿಐ ಕೇಸ್ ವಾಪಾಸ್ ಪಡೆಯುವ ಸಂಪುಟ ನಿರ್ಣಯ ವಿಚಾರದಲ್ಲಿ ನಮ್ಮ ಸರ್ಕಾರ ಸಿಬಿಐಗೆ ವಹಿಸಿರುವುದರಲ್ಲಿ ಯಾವುದೇ ರೀತಿ ಕಾನೂನು ಉಲ್ಲಂಘನೆ ಆಗಿಲ್ಲ. ಹಾಗೇನಾದ್ರೂ ಆಗಿದ್ದರೆ ನ್ಯಾಯಾಲಯದಲ್ಲಿ ಇವರು ವಾದ ಮಾಡಬೇಕಿತ್ತಲ್ಲ ಎಂದರು.
ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ವರ್ತಿಸುತ್ತಿದೆ. ಈ ವಿಚಾರದಲ್ಲಿ ತಪ್ಪು ಆಗಿದ್ದರೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಬೇಕಿತ್ತು. ಆಗ ಏಕೆ ನ್ಯಾಯಾಲಯಕ್ಕೆ ಹೋಗಿಲ್ಲ? ನಾವು ಅಧಿಕಾರದಲ್ಲಿದ್ದಾಗ ಎಲ್ಲವೂ ಕಾನೂನು ಪ್ರಕಾರವಾಗಿ ಕೆಲಸ ಮಾಡಿದ್ದೇವೆ. ನಾವು ಕಾನೂನು ಉಲ್ಲಂಘನೆ ಮಾಡಿದ್ದರೆ ನ್ಯಾಯಾಲಯ ಅದನ್ನು ಐದೇ ನಿಮಿಷದಲ್ಲಿ ತಿರಸ್ಕಾರ ಮಾಡುತ್ತಿತ್ತು. ಈ ಹಿಂದೆಯೂ ಹಲವು ಸಿಬಿಐ ಕೇಸ್ ಗಳನ್ನು ಬೇರೆ ಬೇರೆ ಸರ್ಕಾರಗಳು ಹಿಂದೆ ಪಡೆಯಲು ಪ್ರಯತ್ನಿಸಿ ವಿಫಲವಾಗಿವೆ ಹಾಗಾಗಿ ಈ ವಿಚಾರದಲ್ಲೂ ಸಿಬಿಐ ತನಿಖೆಯೇ ಮುಂದುವರಿಯುತ್ತದೆ.ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.
ಡಿಕೆ ಶಿವಕುಮಾರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಕಾರಣಕ್ಕಾಗಿ ಕೇಸ್ ಆಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಎಲ್ಲಿಂದ ಗಳಿಕೆಯಾಗಿದೆ? ಎಲ್ಲಿಂದ ಬಂತು? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ಉತ್ತರ ಕೊಡಬೇಕು ತಾನೇ? ಯಾಕೆ ಹೆದರಿಕೊಳ್ಳುತ್ತಿದ್ದಾರೆ? ಯಾಕೆ ಓಡಿ ಹೋಗುತ್ತಿದ್ದಾರೆ? ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅನ್ನೋ ರೀತಿಯಲ್ಲಿ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರಗೆ ತಿರುಗೇಟು ನೀಡಿದರು.