ಬೆಂಗಳೂರು: ಬೆಂಗಳೂರಿನ (Bengaluru) ಜಯನಗರದ ಡಿಸಿಪಿ ಕಚೇರಿ ಎದುರೇ ಯುವತಿ ಬಟ್ಟೆ ಎಳೆದಾಡಿ ಲೈಂಗಿಕ ಕಿರುಕುಳ(sexual harassment) ನೀಡಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಬರೋಬ್ಬರಿ 500 ಸಿಸಿಟಿವಿಗಳ ಪರಿಶೀಲನೆ ಮಾಡಿ ಆರೋಪಿ ಬಿನ್ನಿಪೇಟೆಯ ಹರೀಶ್ (22) ಎನ್ನುವಾತನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ತಿಂಗಳ 6 ರಂದು ರಾತ್ರಿ 10 ಗಂಟೆ ಸುಮಾರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಯುವತಿಯನ್ನು ಚುಡಾಯಿಸಿದ್ದನು. ಆಕೆಯ ಬಟ್ಟೆ ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿ ಎಸ್ಕೇಪ್ ಆಗಿದ್ದನು. ಈ ಘಟನೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದ ಜಯನಗರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಬರೋಬ್ಬರಿ 500 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬಳಿಕ ಯುವತಿಯನ್ನು ಚುಡಾಯಿಸಿದ್ದು ಹರೀಶ್ ಎನ್ನುವ ಯುವಕ ಎಂಬುದು ಪೊಲೀಸರು ಕೊನೆಗೆ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕೃತ್ಯ ಎಸಗಿದ್ದ ಯುವಕ ತನ್ನ ಮೇಲೆ ಕೇಸ್ ದಾಖಲಾಗಿರುವ ಬಗ್ಗೆ ಅರಿವಿಲ್ಲದೇ, ಏನು ಆಗಿಲ್ಲವೆಂಬಂತೆ ತನ್ನ ಪಾಡಿಗೆ ತಾನಿದ್ದನು. ಸಿಸಿಟಿವಿಗಳ ಬೆನ್ನತ್ತಿ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಈ ವೇಳೆ ತಪ್ಪಾಯಿತು ಎಂದು ಪೊಲೀಸರ ಬಳಿ ಕೇಳಿಕೊಳ್ಳುತ್ತಿದ್ದಾನೆ.