ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಶುಕ್ರವಾರ ಬಂದಿದೆ. ವಾರ ವಾರ ಕನ್ನಡದ ಐದಾರು ಸಿನಿಮಾಗಳು ರಿಲೀಸ್ (Release) ಆಗುವ ಮೂಲಕ ಒಂದು ರೀತಿಯಲ್ಲಿ ಸಂಭ್ರಮ ಮತ್ತೊಂದು ರೀತಿಯಲ್ಲಿ ಆತಂಕ ಸೃಷ್ಟಿ ಮಾಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಾರಕ್ಕೆ 20ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗುವುದರಿಂದ ಯಾವ ಸಿನಿಮಾವನ್ನು ನೋಡಬೇಕು ಎನ್ನುವ ಗೊಂದಲಕ್ಕೆ ಬಿದ್ದಿದ್ದಾನೆ ಪ್ರೇಕ್ಷಕ.
ಈ ವಾರವೂ ಕನ್ನಡದ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ. ಸೂರಿ ಮತ್ತು ಅಭಿಷೇಕ್ ಅಂಬರೀಶ್ (Abhishek Ambarish) ಕಾಂಬಿನೇಷನ್ ನ ‘ಬ್ಯಾಡ್ ಮ್ಯಾನರ್ಸ್’, ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ, ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶಿಸಿ, ನಟಿಸಿರುವ ಹಾಗೂ ರಮ್ಯಾ (Ramya) ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸೇರಿದಂತೆ ಈ ವಾರ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ.
ಈಗಾಗಲೇ ಬ್ಯಾಡ್ ಮ್ಯಾನರ್ಸ್ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕುತೂಹಲ ಮೂಡಿಸಿವೆ. ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರಕ್ಕಾಗಿ ಸ್ವತಃ ದರ್ಶನ್ ಅವರೇ ಅಖಾಡಕ್ಕೆ ಇಳಿದಿದ್ದಾರೆ. ನಾಳೆ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ನಾಳೆ ಯಾರಿಗೆ ಗೆಲುವು ಸಿಗುತ್ತೆ ಕಾದು ನೋಡಬೇಕು.