ಬೆಂಗಳೂರು:- ಶೀಘ್ರದಲ್ಲೇ ಬೆಂಗಳೂರಿನಲ್ಲಿ ಚಿರತೆ ಪಡೆ ಕಾರ್ಯಾರಂಭ ಆಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಗರದ ಹೊರವಲಯದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆ ರಚನೆ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಮುಂದಿನ ಎರಡು ದಿನಗಳ ಒಳಗಾಗಿ ಕಾರ್ಯಾರಂಭಿಸಲಿದೆ ಎಂದರು.
ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಮಾತನಾಡಿದರು.
ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಆನೆ ದಾಳಿ ಸಾವಿನ ಎಲ್ಲ ಪ್ರಕರಣಗಳ ಕುರಿತಂತೆ ಪರಾಮರ್ಶಿಸಿ, ಯಾವ ಭಾಗದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ?, ಇದಕ್ಕೆ ಕಾರಣವೇನು? ಎಂಬ ಬಗ್ಗೆ ತಿಳಿದು ಪರಿಹಾರೋಪಾಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಬಳಿಕ, ಆನೆಗಳು ಯಾವ ಯಾವ ಋತುವಿನಲ್ಲಿ ಯಾವ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ ಎಂಬ ಬಗ್ಗೆಯೂ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುಂಚಿತವಾಗಿಯೇ ಜಾಗೃತಿ ಮೂಡಿಸಲು ಮತ್ತು ಮಾಹಿತಿ ನೀಡಲು ನಿರ್ದೇಶನ ನೀಡಿದರು.
ಅರಣ್ಯದಂಚಿನ ಶಾಲಾ ಕಾಲೇಜುಗಳಿಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ತಜ್ಞರು ತೆರಳಿ ವಿದ್ಯಾರ್ಥಿಗಳಿಗೆ ಆನೆಗಳು ಮತ್ತು ಕಾಡು ಪ್ರಾಣಿಗಳ ಸ್ವಭಾವದ ಬಗ್ಗೆ ಹಾಗೂ ಕಾಡು ಪ್ರಾಣಿಗಳು ನಾಡಿಗೆ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆಯೂ ತಿಳಿ ಹೇಳಲು ತಿಳಿಸಿದರು.
ರೈಲ್ವೆ ಬ್ಯಾರಿಕೇಡ್, ಆನೆ ನಿಗ್ರಹ ಕಂದಕ ಮತ್ತು ಸೌರ ಬೇಲಿಗಳನ್ನು ಅಳವಡಿಸುವ ಕುರಿತಂತೆಯೂ ಹೆಚ್ಚಿನ ಮುತುವರ್ಜಿ ವಹಿಸಬೇಕು. ವಿಳಂಬ ಮಾಡಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಎಲ್ಲ ಉನ್ನತ ಅಧಿಕಾರಿಗಳು ವಾರದಲ್ಲಿ ಕನಿಷ್ಠ ಎರಡು ದಿನ ಕಾಡಾನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಲಾಗಿದ್ದು, ಹಿರಿಯ ಐ.ಎಫ್.ಎಸ್ ಅಧಿಕಾರಿಗಳನ್ನು ವಿವಿಧ ಜಿಲ್ಲೆಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದರು.