ಬೆಂಗಳೂರು:– ಕಾಂತರಾಜು ವರದಿ ಸ್ವೀಕಾರಕ್ಕೆ ಗೊಂದಲ ಏಕೆ!? ಎಂದು ಮಾಜಿ ಸಚಿವ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವರದಿ ಸ್ವೀಕಾರಕ್ಕೆ ತರಾತುರಿ ಏಕೆ?. ವರದಿ ಮೂಲ ಯಾರು ಕದ್ದಿದ್ದಾರೆ ಅನ್ನೋದು ತನಿಖೆ ಆಗಬೇಕು. ಅದರ ಮೂಲ ಕಳೆದುಹೋಗಿದೆ. ಅವರೇ ಬರೆಸಿ ವರದಿ ಮಾಡಿದ್ದಾರಾ?. ವರದಿ ವೈಜ್ಞಾನಿಕವಾದರೆ ಕಾರ್ಯದರ್ಶಿ ಏಕೆ ಸಹಿ ಹಾಕಿಲ್ಲ?. ಯಾರ ಮನೆಯಲ್ಲಿ ಬರೆದಿದ್ದಾರೆ, ಎಲ್ಲಿ ಕೂತು ಬರೆದಿದ್ದಾರೆ ಎಂಬುದು ಗೊತ್ತಾಗಬೇಕು ಎಂದರು.
ಕಾಂತರಾಜು ವರದಿ ಗೊಂದಲಕ್ಕೆ ಕಾರಣವಾಗಿದೆ. ಕಾಂತರಾಜು ವರದಿ ಘೋಷಣೆ ಮಾಡುವಾಗ ಸಮಿತಿ ಮಾಡದೆ ಏಕಾಏಕಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದು ಹತ್ತು ವರ್ಷ ಹಳೆಯ ವರದಿ. ಜನಸಂಖ್ಯೆ ಬದಲಾವಣೆ ಆಗಿದೆ. ನಮ್ಮ ಮನೆಗೆ ಬಂದಿಲ್ಲ ಎಂದು ಸಾರ್ವಜನಿಕರಿಂದ ದೂರು ಇದೆ. ಕಾಂತರಾಜು ವರದಿಗೆ ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ. ಅಲ್ಲದೆ ವರದಿಯ ಮೂಲ ಪ್ರತಿ ಕಾಣೆಯಾಗಿದೆ ಎಂದು ತಿಳಿಸಿದರು.
168 ಕೋಟಿ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿದ ವರದಿ ಮೂಲ ಪ್ರತಿ ಕಾಣೆಯಾಗಿದೆ ಎಂದರೆ ಸರ್ಕಾರ ಏಕೆ ತನಿಖೆ ಮಾಡಿಲ್ಲ?. ಇದರ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ. ಸರ್ಕಾರ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಯಾರನ್ನೋ ಕಾಪಾಡುವ ಕೆಲಸ ಮಾಡುತ್ತಿದೆ. ಕಳ್ಳತನದ ಬಗ್ಗೆ ತನಿಖೆ ಆಗಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.