ಮಂಡ್ಯ: ಜಾತಿಗಣತಿ ವರದಿ ಜಾರಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಲ್ಲ. ಬದಲಿಗೆ ಸಮಾಜವನ್ನು ಒಡೆಯುವ ಉದ್ದೇಶ ಹೊಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ”ಜಾತಿಗಣತಿ ವಿಚಾರವಾಗಿ ಮುಖ್ಯಮಂತ್ರಿ ಮಾಡಿರುವ ಟ್ವೀಟ್ ಅನ್ನು ಗಮನಿಸಿದ್ದೇನೆ. ಅವರ ಹೆಮ್ಮೆಯ ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ವರದಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಫಲವನ್ನು ಉಣ್ಣಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
”ಒಂದೆಡೆ ಮುಖ್ಯಮಂತ್ರಿಗಳು ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವುದಾಗಿ ಹೇಳುತ್ತಾರೆ. ಮತ್ತೊಂದೆಡೆ ವರದಿಯ ಮೂಲ ಪ್ರತಿಯೇ ಕಾಣೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸರಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನುವ ಮಾಹಿತಿ ಇದೆ. ಮೂಲ ಪ್ರತಿ ಕಳ್ಳತನ ಆದ ಮೇಲೆ ಹೇಗೆ ಜಾರಿ ಮಾಡುತ್ತಾರೆ,” ಎಂದು ಮಾರ್ಮಿಕವಾಗಿ ನುಡಿದರು.
”ಪದೇ ಪದೇ ಕಾಂತರಾಜು ವರದಿಯನ್ನು ಎಚ್.ಡಿ. ಕುಮಾರಸ್ವಾಮಿ ತಿರಸ್ಕರಿಸಿದರೆಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ನನ್ನ ಕಾಲದಲ್ಲಿ ಕಾಂತರಾಜು ವರದಿ ಪಡೆದಿಲ್ಲ. ಕಾಂತರಾಜು ವರದಿಗೆ ಅಂದಿನ ಸದಸ್ಯ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ. ಆದರೆ, ಕಳೆದ 6 ತಿಂಗಳ ಅವಧಿಯಲ್ಲಿ ಕಾಂತರಾಜು ವರದಿಗೆ ಒಪ್ಪಿಗೆ ಕೊಡಲು ಇವರಿಗೆ ಏನಾಗಿತ್ತು,” ಎಂದು ಪ್ರಶ್ನಿಸಿದರು.