2024ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಲುವಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅಂದಹಗಾಎ ಐಪಿಎಲ್ 2024 ಟೂರ್ನಿಯ ಮಿನಿ ಆಕ್ಷನ್ಗೂ ಮುನ್ನ ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದ್ದು, ಈ ಸಲುವಾಗಿ ನವೆಂಬರ್ 26ರ ಗಡುವು ನಿಗದಿಯಾಗಿದೆ. ಹೀಗಾಗಿ ಹಲವು ಫ್ರಾಂಚೈಸಿಗಳು ತಮ್ಮಲ್ಲಿನ ಆಟಗಾರರನ್ನು ಹರಾಜಿಗೂ ಮೊದಲೇ ಅದಲು ಬದಲು ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿವೆ.
2022ರ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಮತ್ತು ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ದೊಡ್ಡ ವಹಿವಾಟನ್ನೇ ನಡೆಸಲು ಮುಂದಾಗಿರುವ ಬಗ್ಗೆ ಇತ್ತೀಚಿನ ವರದಿಗಳು ಬಹಿರಂಗ ಪಡಿಸಿವೆ. 2021ರ ಐಪಿಎಲ್ ಬಳಿಕ ಮುಂಬೈ ಇಂಡಿಯನ್ಸ್ ತೊರೆದು ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ತಂಡಕ್ಕೆ ಕ್ಯಾಪ್ಟನ್ ಆಗಿ ಸೇರಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂಬೈ ಇಂಡಿಯನ್ಸ್ ಪ್ರಯತ್ನ ಮಾಡುತ್ತಿದೆ. ಪ್ಲೇಯರ್ಸ್ ಟ್ರಾನ್ಸ್ಫರ್ ವಿಂಡೋ ಬಳಕೆ ಮಾಡಿ ಟೈಟನ್ಸ್ ಫ್ರಾಂಚೈಸಿಯ ಕ್ಯಾಪ್ಟನ್ನ ಖರೀದಿ ಮಾಡಲು ಮುಂಬೈ ಪ್ರಯತ್ನದಲ್ಲಿದೆ ಎಂಬುದು ತಿಳಿದುಬಂದಿದೆ.
ಅಂದಹಾಗೆ ಹಾರ್ದಿಕ್ ಪಾಂಡ್ಯ 2022ರ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ಗೆ ಮೊದಲ ಪ್ರಯತ್ನದಲ್ಲೇ ಟ್ರೋಫಿ ಗೆದ್ದುಕೊಟ್ಟರು. 2023ರ ಐಪಿಎಲ್ನಲ್ಲೂ ತಂಡವನ್ನು ಫೈನಲ್ಗೆ ಮುನ್ನಡೆಸಿದರು. ಆದರೆ, ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ನಿರಾಶೆ ಅನುಭವಿಸುವಂತ್ತಾಯಿತು. ಹೀಗಾಗಿ ತನ್ನ ಯಶಸ್ವಿ ನಾಯಕನನ್ನು ಬಿಟ್ಟುಕೊಡಲು ಟೈಟನ್ಸ್ ಫ್ರಾಂಚೈಸಿ ಭಾರಿ ಷರತ್ತುಗಳನ್ನೇ ಹಾಕಿದೆ ಎನ್ನಲ್ಲಾಗಿದೆ.