ಕೋಲ್ಕತಾ ನೈಟ್ ರೈಡರ್ಸ್ ತಂಡದ ನೂತನ ಮೆಂಟರ್ ಆಗಿ ನೇಮಕಗೊಂಡಿರುವ ಟೀಮ್ ಇಂಡಿಯಾ ಮಾಜಿ ಓಪನರ್ ಗೌತಮ್ ಗಂಭೀರ್, 2024ರಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಬೇಕು ಎಂದಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ದೂರ ಉಳಿಯುವ ಬಗ್ಗೆ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಮುಂದಿನ ವರ್ಷ ಟಿ20 ವಿಶ್ವಕಪ್ ಆಡುವುದು ಅನುಮಾನ. ಆದರೆ, ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್ನಲ್ಲಿ ಆಡುವುದಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಬದಲು ಅವರೇ ಕ್ಯಾಪ್ಟನ್ಸಿ ನಿಭಾಯಿಸಬೇಕು ಎಂದು ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಈಗ ಸೆಲೆಕ್ಟರ್ಸ್ ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ. ಹೀಗಾಗಿ ಭಾರತದ ಟಿ20 ತಂಡಕ್ಕೆ ತಮ್ಮನ್ನು ಪರಿಗಣಿಸದೇ ಇದ್ದರೆ ಸಮಸ್ಯೆ ಇಲ್ಲ ಎಂಬ ಸಂದೇಶವನ್ನು ರೋಹಿತ್ ಶರ್ಮಾ ಸೆಲೆಕ್ಟರ್ಸ್ಗೆ ನೀಡಿದ್ದಾರೆ ಎನ್ನಲಾಗಿದೆ.
“2024ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಬೇಕು. ರೋಹಿತ್ ಶರ್ಮಾ ಅವರನ್ನು ಬ್ಯಾಟರ್ ಆಗಿ ಆಡಿದ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ಸಿ ಕೊಡಬೇಡಿ. ರೋಹಿತ್ ಶರ್ಮಾ ಅತ್ಯುತ್ತಮ ನಾಯಕ. ಬ್ಯಾಟಿಂಗ್ ವಿಭಾಗದಲ್ಲಿ ಅನುಭವ ಇರಬೇಕು,” ಎಂದು ಸ್ಪೋರ್ಟ್ಸ್ ಕೀಡಾಗೆ ನೀಡಿದ ಸಂದರ್ಶನದಲ್ಲಿ ಗೌತಮ್ ಗಂಭೀರ್ ಹೇಳಿದ್ದಾರೆ. ಗಂಭೀರ್ ಅವರ ಈ ವಾದವನ್ನು ಪಾಕಿಸ್ತಾನದ ಮಾಜಿ ನಾಯಕ ವಸೀಮ್ ಅಕ್ರಮ್ ಕೂಡ ಒಪ್ಪಿಕೊಂಡಿದ್ದಾರೆ.