ಬೆಂಗಳೂರು:- ರಾಯಬಾಗ ಶಾಲೆಯ ಕೊಳವೆಬಾವಿಯಲ್ಲಿ ನೀರು ಕಲುಷಿತ ಆಗುತ್ತಿದೆ ಎಂಬ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹುಬ್ಬಾರವಾಡಿ ಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದರ ರಾಸಾಯನಿಕ ಗೊಬ್ಬರ ಸಂಗ್ರಹಣಗಾರದಿಂದಾಗಿ ಪಕ್ಕದಲ್ಲಿರುವ ಪ್ರಾಥಮಿಕ ಮತ್ತು ಅಂಗನವಾಡಿ ಕೇಂದ್ರದ ಕೊಳವೆಬಾವಿಯ ನೀರು ಕಲುಷಿತಗೊಳ್ಳುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅಲ್ಲದೇ, ಇದೊಂದು ಸಾರ್ವಜನಿಕ ಮಹತ್ವದ ಗಂಭೀರ ವಿಚಾರವಾಗಿದೆ. ಅರ್ಜಿ ಸಂಬಂಧ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ, ರಾಯಬಾಗ ತಹಸೀಲ್ದಾರ್, ಚಿಕ್ಕೋಡಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಯಬಾಗ ಉಪವಿಭಾಗ, ರಾಯಬಾಗ ಸಿಡಿಪಿಒ, ರಾಯಬಾಗ ಬಿಇಒ, ಹುಬ್ಬಾರವಾಡಿ ಪಿಡಿಒ, ರಾಯಬಾಗ ತಾಪಂ ಇಒ, ಎಕ್ಸಿಕ್ಯೂಟಿಟ್ ಇಂಜಿನಿಯರ್ ಹೆಸ್ಕಾಂ ಮತ್ತು ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೋಟಿಸ್ ಜಾರಿಗೊಳಿಸಿದೆ. ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.