ಬೆಂಗಳೂರು:- ಎಚ್ಡಿಕೆ ವಿರುದ್ಧ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಜೆಡಿಎಸ್ ದೂರು ನೀಡಿದೆ.
ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಜೆಡಿಎಸ್ ಪಕ್ಷದಿಂದ ಬುಧವಾರ ದೂರು ನೀಡಲಾಯಿತು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಹಾಗೂ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ ಅವರಿಗೆ ದೂರು ನೀಡಿದರು.
ಪೋಸ್ಟರ್ ಅಂಟಿಸುವಲ್ಲಿ ಪ್ರಮುಖ ಪಾತ್ರಧಾರಿಯಾದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ವಿರುದ್ಧ ಪೊಲೀಸ್ ಕಮಿಷನರ್ಗೆ ದೂರು ನೀಡಲಾಗಿದ್ದು, ಜತೆಗೆ ಡಿ.ಎಸ್.ಕಾರ್ತಿಕ್ ಗೌಡ, ಎಚ್.ಡಿ.ದರ್ಶನ್ ಗೌಡ, ಅರ್ಜುನ್ ಡಿ.ಗೌಡ, ಸಂತೋಷ್ ಎಂಬುವವರ ವಿರುದ್ಧ ಆಯುಕ್ತರಿಗೆ ದೂರು, ನೀಡಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಜೆಡಿಎಸ್ ಮುಖಂಡರು ಒತ್ತಾಯಿಸಿದರು.
ಎಸ್.ಮನೋಹರ್ ಹಿಂದಿನಿಂದಲೂ ಇದೇ ರೀತಿಯಲ್ಲಿ ಕೀಳು ಅಭಿರುಚಿಯ ಪೋಸ್ಟರ್ಗಳನ್ನು ಅಂಟಿಸಿ ತೇಜೋವಧೆ ಮಾಡುವ ಚಾಳಿಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಇಂತಹ ಅನೇಕ ಆರೋಪಗಳು ಇವೆ ಎಂದು ಮುಖಂಡರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಟ್ಟರು. ಮನವಿ ಸ್ವೀಕರಿಸಿದ ಆಯುಕ್ತರು, ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಮನವಿ ಪತ್ರ ನೀಡಿದ ನಂತರ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ ಅವರು, ಮನೋಹರ್ ಒಬ್ಬ ಕೊಳಕು ಮನಸ್ಥಿತಿಯ ವ್ಯಕ್ತಿ. ಸಮಾಜಕ್ಕೆ ಇಂತಹವರು ದೊಡ್ಡ ಬೆದರಿಕೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ ಎಂದು ತಿಳಿಸಿದರು.