ಡಂಕಿ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು.. ಶಾರುಖ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ ಜೋಡಿಯ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು. ಟೀಸರ್ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಇನ್ನೇನೂ ಡಂಕಿ ರಿಲೀಸ್ ಗೆ ದಿನಗಣೆಯಷ್ಟೇ ಬಾಕಿ ಉಳಿದಿದ್ದು, ಚಿತ್ರತಂಡ ಪ್ರಮೋಷನ್ ಅಖಾಡಕ್ಕೆ ಧುಮುಕಿದೆ.
ಡಂಕಿ ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ಟೀ ಸೀರಿಸ್ ಯೂಟ್ಯೂಬ್ ನಲ್ಲಿ ಹಾರ್ಡಿ ಹಾಗೂ ಮನುವಿನ ಪ್ರೇಮಗೀತೆ ಅನಾವರಣಗೊಂಡಿದೆ. ಲುಪ್ ಪುಟ್ ಗಯಾ ಎಂಬ ಸಾಹಿತ್ಯದ ಹಾಡಿಗೆ ಶಾರುಖ್ ಖಾನ್ ತಾಪ್ಸಿ ಹೆಜ್ಜೆ ಹಾಕಿದ್ದಾರೆ. ಮೆಲೋಡಿ ಮ್ಯೂಸಿಕ್ ಮಾಂತ್ರಿಕ ಪ್ರೀತಮ್ ಸಂಗೀತ, ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ ಬರೆದ ಸಾಹಿತ್ಯದ ರೋಮ್ಯಾಂಟಿಕ್ ಸಿಂಗಿಂಗ್ ಅರಿಜಿತ್ ಸಿಂಗ್ ಅವರ ಭಾವಪೂರ್ಣ ಗಾಯನ ಕೇಳುಗರನ್ನು ಮೋಡಿ ಮಾಡ್ತಿದೆ. ಗಣೇಶ್ ಆಚಾರ್ಯ ಲುಪ್ ಪುಟ್ ಗಯಾ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಮತ್ತು ರಾಜ್ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.