ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಕಮೀಷನರೇಟ್ ವತಿಯಿಂದ ಅವಳಿನಗರದಲ್ಲಿ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಈಗಾಗಲೇ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಓಸಿ ಮಟ್ಕಾ, ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಪ್ರಕರಣಗಳನ್ನು ದಾಖಲು ಮಾಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಇವುಗಳಲ್ಲದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಉತ್ತರ, ದಕ್ಷಿಣ ಹಾಗೂ ಧಾರವಾಡ ಉಪವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 172 ರೌಡಿಶೀಟರ್ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದು,
ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ದಾಳಿ ವೇಳೆ ಬೆಂಡಿಗೇರಿ ಪೊಲೀಸ್ ಠಾಣೆಯ ರೌಡಿಶೀಟರಾದ ಷಣ್ಮುಗ ರವೀಂದ್ರ ಗುಡಿಹಾಳ ಎಂಬುವವನ ಮನೆಯಲ್ಲಿ ಮಾರಕಾಸ್ತ್ರಗಳು ದೊರೆತಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ಒಟ್ಟು 05 ರೌಡಿಶೀಟರ್ಗಳ ಮೇಲೆ ಸಿಆರ್ಪಿಸಿ ಕಾಯ್ದೆಯಡಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿರುತ್ತದೆ.
ಇನ್ನೂ ವಿವಿಧ ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿದ್ದರೂ ತಲೆ ಮರೆಸಿಕೊಂಡಿದ್ದ 03 ಜನ ರೌಡಿಶೀಟರ್ಗಳು ಸಿಕ್ಕಿಬಿದ್ದಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಹುಬ್ಬಳ್ಳಿ ಧಾರವಾಡ ನಗರದಲ್ಲಿ ಯಾವುದೇ ರೀತಿಯ ರೌಡಿಸಂ-ಪುಂಡಾಟ ಚಟುವಟಿಕೆಗಳಿಗೆ ಅವಕಾಶವಿಲ್ಲ (Zero tolerance) ಎಂಬುದನ್ನು ಈ ಮೂಲಕ ತಿಳಿಸಿದ್ದು, ಒಂದು ವೇಳೆ ಅಂತಹ ಚಟುವಟಿಕೆಗಳು ಕಂಡುಬಂದಲ್ಲಿ ಅವರುಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.