ಕಳೆದ ನಾಲ್ಕೈದು ದಿನಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಮಳೆ, ಹಾಲಿ ಬೆಳೆಗೆ ಜೀವಕಳೆ ತಂದಿರುವ ಜತೆಗೆ ಹಿಂಗಾರು ಬಿತ್ತನೆಗೆ ಆಶಾದಾಯಕ ಎನಿಸಿದೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಮೆಣಸಿನಕಾಯಿ, ತೊಗರಿ ಸೇರಿ ಬಹುತೇಕ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಸ್ಥಿತಿಯಲ್ಲಿದ್ದವು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆಗಳಿಗೆ ಸಹಕಾರಿಯಾಗಿದೆ. ತೇವಾಂಶ ಹೆಚ್ಚಳದಿಂದ ಬೆಳೆಗಳು ಪುನಃ ಚಿಗುರೊಡೆದು ನಳನಳಿಸುವಂತಾಗಿದೆ. ನಷ್ಟದ ಭೀತಿಯಲ್ಲಿದ್ದ ರೈತರಿಗೆ ಮಳೆ ಹೊಸ ಭರವಸೆ ಮೂಡಿಸಿದೆ.
ನೀರಾವರಿ ಪ್ರದೇಶದಲ್ಲಿ 31,401 ಹೆಕ್ಟೇರ್ ಹಿಂಗಾರು ಬಿತ್ತನೆ ಗುರಿಯಲ್ಲಿ ಈವರೆಗೆ ಕೇವಲ 4,625 ಹೆಕ್ಟೇರ್, ಮಳೆಯಾಶ್ರಿತ ಪ್ರದೇಶದಲ್ಲಿ 47,253 ಹೆಕ್ಟೇರ್ ಗುರಿಯಲ್ಲಿ 2,681 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಸದ್ಯ ಸುರಿಯುತ್ತಿರುವ ಮಳೆ, ಮೋಡ ಕವಿದ ವಾತಾವರಣದಿಂದ ಹಿಂಗಾರು ಬಿತ್ತನೆ ಚುರುಕು ಪಡೆಯುವ ಲಕ್ಷಣವಿದೆ. ಬಿತ್ತನೆಗೆ ಅನ್ನದಾತರು ಸಜ್ಜುಗೊಳ್ಳುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಒಟ್ಟು 71,216ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿದೆ. ಸಿರುಗುಪ್ಪ, ಕಂಪ್ಲಿ, ಬಳ್ಳಾರಿ ತಾಲೂಕು, ಸಂಡೂರು, ಕುರುಗೋಡು ಪ್ರದೇಶದಲ್ಲಿ ಭತ್ತದ ಬೆಳೆ ಬಹುತೇಕ ಕಟಾವು ಹಂತಕ್ಕೆ ಬಂದಿದೆ. ಫಸಲು ಕೈಸೇರುವ ಹೊತ್ತಲ್ಲಿ ವರುಣನ ಆಗಮನದಿಂದ ಸಂಕಷ್ಟ ಎದುರಿಸುವಂತಾಗಿದೆ. ಕಾಳು ತುಂಬಿ ಕಟಾವಿಗೆ ಸಿದ್ಧವಾಗುತ್ತಿರುವ ಬೆಳೆ ಮಳೆಯಿಂದಾಗಿ ನೆಲ ಕಚ್ಚುವಂತಾಗಿದೆ. ಕಾಳು ಭೂಮಿ ಪಾಲಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.