ಹುಬ್ಬಳ್ಳಿ : ಪೊಲೀಸರ ಪ್ರತಿನಿತ್ಯ ಕೆಲಸ ಒತ್ತಡದಿಂದ ಆರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಮಂಜಸವಾಗಿದೆ. ಕ್ರೀಡೆ ಎಂದಾಕ್ಷಣ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಉತ್ಸಾಹ ಇಮ್ಮಡಿಯಾಗುವುದು. ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಾಯಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಹೇಳಿದರು. ಇಂದು ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕದ ವತಿಯಿಂದ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪ್ರಗತಿಯ ಸಂಕೇತ ಪಾರಿವಾಳ ಹಾಗೂ ತ್ರಿವರ್ಣ ಬಲೂನುಗಳನ್ನು ಗಾಳಿಯಲ್ಲಿ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಒತ್ತಡದಿಂದ ಹೊರಬರಲು ವ್ಯಾಯಾಮ ತುಂಬಾ ಅವಶ್ಯಕ. ದಿನನಿತ್ಯ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಕ್ರೀಡೆ ಬಹಳ ಮುಖ್ಯ. ಸಮಾಜದಲ್ಲಿನ ನಾಗರಿಕರು ಕಾನೂನು ಪರಿಪಾಲನೆ ಮಾಡಬೇಕಿದೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸಕರಾತ್ಮಕ ಚಿಂತನೆ ಮಾಡಲು ಕ್ರೀಡೆ ಅತೀ ಅವಶ್ಯಕ. ತಾಳ್ಮೆ ಹಾಗೂ ಶಿಸ್ತನ್ನು ಕ್ರೀಡೆಯಿಂದ ಕಲಿಯಬಹುದಾಗಿದೆ. ಅಲ್ಲದೇ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಕಲಿಸುತ್ತದೆ. ಸೋಲು ಗೆಲುವುಗಳ ಹೊರತಾಗಿ ಸಂತೋಷದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತಿ ಮುಖ್ಯವಾಗಿದೆ. ಕ್ರೀಡಾ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ನೀವು ಪಾಲ್ಗೊಳ್ಳಬೇಕು ಎಂದು ಹಾರೈಸಿದರು.
ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ನೆರವಿಗೆ ಬಾರದ ಸಹ ಪ್ರಯಾಣಿಕರು
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆಯರಾದ ರೇಣುಕಾ ಕೆ.ಸುಕುಮಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ವೃತ್ತಿಯ ಜೊತೆಗೆ ಆಟೋಟಗಳಲ್ಲಿ ಪೊಲೀಸರು ಭಾಗವಹಿಸಬೇಕು. ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ. ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ದೈಹಿಕವಾಗಿ ಸದೃಢರಾಗಲು ಮುಂದಾಗಬೇಕು. ತಂಡದ ಸ್ಪೂರ್ತಿಯನ್ನು ಮೂಡಿಸಲು ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ ಎಂದರು.
ಕಳೆದ 14 ವರ್ಷಗಳಿಂದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ವಿಜೇತರಾಗಿರುವ ಐ.ಎಸ್.ದೇಸಾಯಿ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು. ಸಿಎಆರ್ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಸಂಚಾರ ವಿಭಾಗ, ಮಹಿಳಾ ವಿಭಾಗ ಹಾಗೂ ಧಾರವಾಡ ವಿಭಾಗ ತಂಡಗಳು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದವು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಐ.ಜಿ.ಸನದಿ, ಡಿಸಿಪಿಗಳಾದ ರವೀಶ್ ಸಿ.ಆರ್, ಯಲ್ಲಪ್ಪ ಕಾಶಪ್ಪನವರ, ರಾಜೀವ್ ಎಂ., ಎಸಿಪಿಗಳಾದ ಬಲ್ಲಪ್ಪ ನಂದಗಾವಿ, ವಿನೋದ ಮುಕ್ತೇದಾರ, ಆರ್.ಕೆ.ಪಾಟೀಲ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಕುಟುಂಬಸ್ಥರು ಇತರರು ಭಾಗವಹಿಸಿದ್ದರು. ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿಗಳಾದ ರಾಜೀವ್ ಎಂ. ವಂದಿಸಿದರು.