ಬೆಂಗಳೂರು:- ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ, ನಡೆಯುವುದು ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ನವರದು ನುಡಿದಂತೆ ನಡೆದ ಸರ್ಕಾರ ಅಲ್ಲ. ಸರ್ಕಾರವು 6 ತಿಂಗಳ ಆಡಳಿತದ ಕೊಟ್ಟಿರುವ ಅಂಕಿ – ಅಂಶಗಳು ಪ್ರಶ್ನಾರ್ಥಕವಾಗಿವೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಚುನಾವಣೆ ಸಂದರ್ಭದಲ್ಲಿ ಜನರಿಗೆ 5 ಗ್ಯಾರಂಟಿಗಳನ್ನು ನೀಡಿತ್ತು. ಕೊಟ್ಟ ಮಾತಿನಂತೆ ಅಥವಾ ನುಡಿದಂತೆ ನಡೆದಿದ್ದೇವೆ ಎಂದು ನಿನ್ನೆ ದೊಡ್ಡ ದೊಡ್ಡ ಜಾಹೀರಾತು ನೀಡಿದ್ದಾರೆ. ಅಂಕಿ – ಅಂಶಗಳನ್ನೂ ಕೊಟ್ಟಿದ್ದಾರೆ. ಆದರೆ, ಎಷ್ಟೋ ಜನರಿಗೆ ಅಕ್ಕಿಗೆ ಕೊಡುವ ಹಣ ಸಿಕ್ಕಿಲ್ಲ. ಮಹಿಳೆಯರಿಗೆ 2 ಸಾವಿರ ರೂಪಾಯಿ ಒಂದು ಕಂತು ಮಾತ್ರ ಸಿಕ್ಕಿದೆ. ಇನ್ನೂ 3 ತಿಂಗಳು ಬಂದಿಲ್ಲ. ವಿದ್ಯುತ್ 200 ಯೂನಿಟ್ ಎಂದಿದ್ದರು. 200 ಯೂನಿಟ್ ಬದಲು ವರ್ಷದ ಸರಾಸರಿ ಯೂನಿಟ್ ಕೊಡುತ್ತಿದ್ದಾರೆ. ಯುವನಿಧಿ ಇನ್ನೂ ಪ್ರಾರಂಭಿಸಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳು ಜನರಿಗೆ ತಲುಪುತ್ತಿಲ್ಲ. ಕಾಂಗ್ರೆಸ್ ವೈಫಲ್ಯಗಳನ್ನು ನಾವು ತಿಳಿಸುತ್ತಿದ್ದೇವೆ ಎಂದ ಅವರು, ಬಿಜೆಪಿಯವರು ಕಾಂಗ್ರೆಸ್ ಯೋಜನೆಗಳನ್ನು ನಕಲು ಮಾಡಿಲ್ಲ. ಬದಲಾಗಿ ಕಾಂಗ್ರೆಸ್ಸೇ ನಮ್ಮ ಯೋಜನೆಗಳ ನಕಲು ಮಾಡಿದೆ. ನಾವು 12 ಕೋಟಿ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದೇವೆ. ಇದು ಸಾಂದರ್ಭಿಕವಾಗಿ ಮಾಡಬೇಕಾದ ಕೆಲಸ. 1.25 ಲಕ್ಷ ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದೇವೆ. ಅನೇಕ ಟನೆಲ್ ಮಾಡಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ 6 ಸಾವಿರ ರೂಗಳನ್ನು ಪ್ರಧಾನಿಯವರು ವರ್ಗಾಯಿಸುತ್ತಿದ್ದಾರೆ. ರಾಜ್ಯದಲ್ಲೂ 4 ಸಾವಿರವನ್ನು ಹಾಕುತ್ತಿದ್ದು, ಅದನ್ನು ನೀವು ಬಂದ್ ಮಾಡಿದ್ದೀರಿ.
ಗರೀಬ್ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಪಡಿತರ ಕೊಡಲಾಗಿದೆ. ಅದೇನೂ ಗ್ಯಾರಂಟಿ ಅಲ್ಲ. ಪ್ರಣಾಳಿಕೆಯಲ್ಲೂ ಇರಲಿಲ್ಲ. 220 ಕೋಟಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ಕೊಡಲಾಯಿತು. ಅದೇನೂ ಗ್ಯಾರಂಟಿ ಯೋಜನೆ ಅಲ್ಲ. ಉಜ್ವಲ ಯೋಜನೆಯಡಿ 9.6 ಕೋಟಿ ಸಿಲಿಂಡರ್ಗಳನ್ನು ಉಚಿತವಾಗಿ ಬಡವರಿಗೆ ನೀಡಿದ್ದೇವೆ. ಅದನ್ನು ಗ್ಯಾರಂಟಿ ಎನ್ನಲಿಲ್ಲ ಎಂದರು.