ಬೆಂಗಳೂರು:- ನಗರದ ಹಲಸೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದಿಂದ ಪ್ರೀತಿಸಿ ಮನೆ ಮಗಳನ್ನು ಕರೆದುಕೊಂಡು ಓಡಿ ಹೋಗಿದ್ದೂ ಅಲ್ಲದೆ ಅತ್ತೆ ಮನೆಯಲ್ಲಿದ್ದ ವಸ್ತುಗಳನ್ನೂ ಕದ್ದೊಯ್ದ ಅಳಿಯನನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.
ಪ್ರದೀಪ್ ಕುಮಾರ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಅತ್ತೆ ರೆಜಿನಾ ಕನ್ಯಾಕುಮಾರಿಗೆ ಹೋದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಕಳ್ಳತನ ಮಾಡಿ ಚಿನ್ನಾಭರಣ ತೆಗೆದುಕೊಂಡು ಹೋಗುವಾಗ ಅಕ್ಕಪಕ್ಕದ ನಿವಾಸಿಗಳು ನೋಡಿದ್ದರು. ಪ್ರಶ್ನೆ ಮಾಡಿದಾಗ ನಾನು ಅವರ ಸಂಬಂಧಿಕ ಎಂದು ಹೇಳಿದ್ದ. ಆದ್ರೆ ಸ್ಥಳೀಯರು ಚಾಣಾಕ್ಷತನ ತೋರಿ, ಚಿನ್ನಾಭರಣ ತೆಗೆದುಕೊಂಡು ಹೋಗುತ್ತಿದ್ದ ಪ್ರದೀಪ್ ಕುಮಾರನ ಫೊಟೋವನ್ನು ಮೊಬೈಲ್ ನಲ್ಲಿ ಕರೆ ಹಿಡಿದಿದ್ದಾರೆ. ಜೊತೆಗೆ ರೆಜಿನಾ ಅವರಿಗೆ ಕರೆ ಮಾಡಿ, ಹೀಗೆಲ್ಲಾ ಆಗಿದೆ ಎಂದು ಫೋಟೋ ಸಮೇತ ಮಾಹಿತಿ ನೀಡಲು ಯತ್ನಿಸಿದ್ದರು. ಆದರೆ ರೆಜಿನಾ ಅವರ ನಂಬರ್ ನಾಟ್ ರೀಚಬಲ್ ಆದ ಹಿನ್ನೆಲೆ ಸಂಪರ್ಕ ಸಾಧ್ಯವಾಗಿರಲಿಲ್ಲ.
ನಂತರ ರೆಜಿನಾ ಕನ್ಯಾಕುಮಾರಿಯಿಂದ ವಾಪಾಸ್ ಬಂದಾಗ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಒಳಗೆಲ್ಲಾ ಪರಿಶೀಲಿಸಿದಾಗ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ರೂ ಕಳ್ಳತನವಾಗಿರುವುದು ಖಚಿತಪಟ್ಟಿದೆ.
ಈ ಮಧ್ಯೆ ಅಕ್ಕಪಕ್ಕದ ನಿವಾಸಿಗಳು ಬಂದು ಕಳ್ಳನನ್ನು ತಾವು ನೋಡಿರೋದಾಗಿ ರೆಜಿನಾಗೆ ತಿಳಿಸಿದ್ದಾರೆ. ಫೊಟೋ ನೋಡಿದಾಗ ತನ್ನ ಅಳಿಯನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತನ್ನ ಅಳಿಯನ ವಿರುದ್ಧವೇ ರೆಜಿನಾ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸ್ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.